

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಕಲ ಜೀವಾತ್ಮರಿಗೆ ಲೇಸು ಬಯಸಲು ಹೇಳಿದ ಬಸವಣ್ಣ ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿದರು. ಜಗತ್ತಿನ ಅತಿದೊಡ್ಡ ಮತ್ತು ಪುರಾತನ ಸಂಸ್ಕೃತಿ ಬಸವ ಸಂಸ್ಕೃತಿ ಎಂದು ಹಿರಿಯ ಸಾಹಿತಿ ರಂಜಾನ ದರ್ಗಾ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಎಸ್.ಆರ್. ಗುಂಜಾಳ ದತ್ತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಕಾಶ ಗಿರಿಮಲ್ಲನವರ ರಚನೆಯ ಡಾ. ಎಸ್.ಆರ್. ಗುಂಜಾಳರ ಬಸವಸೇವೆ ಗ್ರಂಥ ಬಿಡುಗಡೆಗೊಳಿಸಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಉಪನ್ಯಾಸ ನೀಡಿದರು.
ಶರಣರು ಸಾರಿದ ಕಾಯಕ, ಪ್ರಸಾದ, ದಾಸೋಹ ಇವುಗಳಿಗೆ 10 ಸಾವಿರ ವರ್ಷಗಳ ಇತಿಹಾಸವಿದೆ. ಕಾಯಕ ಯೋಗ್ಯವಾದ ಉತ್ಪಾದನೆ, ಪ್ರಸಾದ ದೇವರ ಕೃಪೆ, ದಾಸೋಹ ಯೋಗ್ಯವಾದ ಸಮಾಜಕ್ಕೆ ವಿತರಣೆ. ಕಾಯಕದಿಂದ ಬಂದದ್ದು ದೇವರ ಕೃಪೆ ಎಂದು ತಿಳಿದು ಯೋಗ್ಯವಾದ ಕೆಲಸಗಳಿಗೆ ದಾನಗೈಯುವುದೇ ಶರಣರು ಸಾರಿದ ಮೌಲ್ಯ. ವೈವಿಧ್ಯತೆಯಲ್ಲಿ ಏಕತೆ ಕಂಡುಕೊಂಡವರು ಬಸವಣ್ಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಗುಂಜಾಳ ದಂಪತಿ ಆದರ್ಶ ದಂಪತಿ. ಪರಸ್ಪರ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು. ಆರೋಗ್ಯರ್ಪೂಣ ಸಮಾಜ ನಿರ್ಮಿಸುವಲ್ಲಿ ಕ್ರಿಯಾಶೀಲರಾದವರು. ಅವರ ಸೇವೆ ಸಮಾಜಕ್ಕೆ ನಿರಂತರವಾಗಿರಲಿ ಎಂದರು.
ಡಾ. ಎಸ್.ಆರ್. ಗುಂಜಾಳ ಮಾತನಾಡಿದರು. ಬಿ.ಎಲ್. ಪಾಟೀಲ, ಡಾ. ಚಂದ್ರಶೇಖರ ರೊಟ್ಟಿಗವಾಡ, ಸುರೇಶ ಹೊರಕೇರಿ, ಮಹಾಂತೇಶ ನರೇಗಲ್, ವೀರಪ್ಪ ಜಾಲಿಕಟ್ಟಿ, ಶಿವಾನಂದ ಹೂಗಾರ, ಡಾ. ಡಿ.ಎಂ. ಶರಭೇಂದ್ರಸ್ವಾಮಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.