ಬಸವ ಸಂಸ್ಕೃತಿ ಅಭಿಯಾನ 13ರಂದು

Basava Culture Campaign on the 13th
ಹಳಿಯಾಳದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಯೋಜಿಸಿದ್ದ ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಲಾಯಿತು. ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ತಾಯಿ, ಮಾಜಿ ಶಾಸಕ ವಿ.ಎಸ್. ಪಾಟೀಲ, ಬಸವರಾಜ ಓಶಿಮಠ, ಶಿವದೇವ ದೇಸಾಯಿಸ್ವಾಮಿ, ಸುಮಂಗಲಾ ಅಂಗಡಿ ಇತರರಿದ್ದರು.
Published on

ಹಳಿಯಾಳ/ಶಿರಸಿ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತ ನಾಡಿನಾದ್ಯಂತ ಬಿತ್ತರಿಸಲು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ರಾಜ್ಯದಾದ್ಯಂತ ಪ್ರತಿದಿನ ಜಿಲ್ಲಾ ಕೇಂದ್ರಗಳಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಮುಂಡಗೋಡನಲ್ಲಿ ಸೆ. 13ರಂದು ಆಯೋಜಿಸಲಾಗಿದೆ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ತಾಯಿ ಹೇಳಿದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ನಾಡಿನ ಹಲವಾರು ಮಠಾಧೀಶರು, ಚಿಂತಕರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಜನರು ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ವಿ.ಎಸ್. ಪಾಟೀಲ, ಉಪಾಧ್ಯಕ್ಷ ಬಸವರಾಜ ಓಶಿಮಠ, ಬಸವರಾಜ ಪಾಟೀಲ, ಕಾರ್ಯದರ್ಶಿ ಶ್ರೀಶೈಲ ಐನಾಪೂರ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು.

ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿಸ್ವಾಮಿ, ಮಲ್ಲಿಕಾರ್ಜುನ ತೋರಣಗಟ್ಟಿ, ಶಿವು ಶೆಟ್ಟರ, ಕಸಾಪ ತಾಲೂಕಾದ್ಯಕ್ಷೆ ಸುಮಂಗಲಾ ಅಂಗಡಿ, ಪ್ರಕಾಶ ಕಿತ್ತೂರ, ಸುಮಿತ್ರ ಓಶಿಮಠ, ಸುಧಾ ದೇಸಾಯಿಸ್ವಾಮಿ ಇತರರಿದ್ದರು.

ಉನ್ನತ ಧ್ಯೇಯದೊಂದಿಗೆ ಆರಂಭ

ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣ ಕಾರ್ಯತಗತಗೊಳಿಸಿದ ಬಸವಾದಿ ಶರಣರ ತತ್ವಾದರ್ಶಗಳಾದ ಸಂಸ್ಕಾರ, ಸದಾಚಾರ, ನೈತಿಕತೆ, ಸೌಹಾರ್ದತೆ, ಕಾಯಕ, ದಾಸೋಹ, ಏಕದೇವನಿಷ್ಠೆ ಇತ್ಯಾದಿಗಳನ್ನು ಪ್ರತಿ ಮನ-ಮನೆಗಳಿಗೂ ತಲುಪಿಸುವುದನ್ನು ಕ್ರಿಯಾಶೀಲಗೊಳಿಸಲಾಗುತ್ತದೆ. ಮನುಷ್ಯ ಮನುಷ್ಯರ ನಡುವೆ ನೈತಿಕ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸಲು ಅನುಭವ ಮಂಟಪವೆಂಬ ಧರ್ಮ ಸಂಪತ್ತು ಸಮಯ ಪ್ರಜ್ಞೆ, ಕಾಯಕ ಶ್ರದ್ಧೆ, ಇಂತಹ ಉನ್ನತ ವಿಚಾರಗಳನ್ನು ಜಾರಿಗೆ ತರುವುದು. ಇವೆಲ್ಲ ಸದಾಶಯವನ್ನಿಟ್ಟುಕೊಂಡು ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನಕ್ಕೆ ಸೆ. 1ರಂದು ಬಸವನ ಬಾಗೇವಾಡಿಯಲ್ಲಿ ಚಾಲನೆ ನೀಡಲಾಗಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಈ ಅಭಿಯಾನ ನಡೆಯಲಿದೆ. ಅ.5 ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ ಎಂದು ಮಾತೆ ಬಸವೇಶ್ವರಿ ತಾಯಿ ಹೇಳಿದರು.

ಬಸವ ಸಂಸ್ಕೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ, ಪಾದಯಾತ್ರೆ, ಬಹಿರಂಗ ಸಭೆ, ವಚನ ಸಂಗೀತ, ಉಪನ್ಯಾಸ, ನಾಟಕ ಪ್ರದರ್ಶನ ಇತ್ಯಾದಿ ಚಟುವಟಿಕೆಗಳೊಂದಿಗೆ ನೆರವೇರಲಿರುವ ಸಮಾರಂಭಕ್ಕೆ ಸ್ವಯಂಪ್ರೇರಿತವಾಗಿ ಜಿಲ್ಲೆಯ ಪ್ರತಿ ಹಳ್ಳಿ, ಪಟ್ಟಣಗಳಿಂದ ಆಗಮಿಸಿ ಸಮ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಬೇಕು. ವಿ.ಎಸ್.ಪಾಟೀಲ, ಮಾಜಿ ಶಾಸಕ ಹಾಗೂ ಉತ್ಸವ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net