

ಲಕ್ಷ್ಮೇಶ್ವರ/ಶಿಗ್ಲಿ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶ್ರೀಗುರು ಕೊಟ್ಟೂರೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನಿಮಿತ್ತ ಮಾ.28ರಿಂದ ಪ್ರವಚನ, ಜನಜಾಗೃತಿಗಾಗಿ ಪಾದಯಾತ್ರೆ ಮತ್ತಿತರ ಧಾರ್ವಿುಕ ಕಾರ್ಯಕ್ರಮಗಳು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿವೆ.
ಮಂಗಳವಾರ ಸಂಜೆ ಗ್ರಾಮದಲ್ಲಿ ನಡೆದ ಬಸವ ಬುತ್ತಿ ಮೆರವಣಿಗೆ ಗಮನ ಸೆಳೆಯಿತು. ಗ್ರಾಮದ ಮಹಿಳೆಯರು, ಮಕ್ಕಳು ಶಿಗ್ಲಿ ಸೀರೆ-ಕುಪ್ಪಸ ತೊಟ್ಟು ತಲೆಯ ಮೇಲೆ ಬುತ್ತಿಯ ಗಂಟು ಹೊತ್ತು ಗ್ರಾಮದ ಪ್ರಮುಖ ಮಾರ್ಗದ ಮೂಲಕ ದೇವಸ್ಥಾನದಲ್ಲಿ ಜಮಾವಣೆಗೊಂಡರು. ಶ್ರೀಗಳ ಪ್ರವಚನದ ನಂತರ ಎಲ್ಲರೂ ಬುತ್ತಿಯ ಊಟ ಮಾಡಿ ಸಂತಸ ಪಟ್ಟರು.
ಶ್ರೀ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ವಿಶ್ವಗುರು ಬಸವಣ್ಣನವರ ಪರಿಕಲ್ಪನೆಯ ಬಸವ ಬುತ್ತಿ ಅತ್ಯಂತ ಅರ್ಥಪೂರ್ಣವಾಗಿದೆ. ಬಸವಣ್ಣನವರ ಸಮಾನತೆ ಹಾಗೂ ದಾಸೋಹದ ಮಹತ್ವ ಸಾರುವ ಬಸವ ಬುತ್ತಿ ಕಾರ್ಯಕ್ರಮದಿಂದ ಎಲ್ಲ ಜಾತಿ, ಜನಾಂಗದವರಲ್ಲಿ ಪರಸ್ಪರ ಸ್ನೇಹ, ಅನ್ಯೋನ್ಯತೆ, ಭ್ರಾತೃತ್ವ, ಬಾಂಧವ್ಯ, ಸಮಭಾವ ಮೂಡುತ್ತದೆ. ಪರಸ್ಪರ ಹಂಚಿಕೊಂಡು ಉಣ್ಣುವುದರಿಂದ ಬಡ-ಬಲ್ಲಿದ ಬೇಧ ಭಾವ ತೊಲಗಿ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ ಎಂದರು.
ಶ್ರೀಗುರು ಕೊಟ್ಟೂರೇಶ್ವರ ವಿವಿಧೋದ್ದೇಶಗಳ ಸೇವಾ ಸಮಿತಿ ಅಧ್ಯಕ್ಷ ಮಹಾದೇವಪ್ಪ ಬೆಳವಿಗಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಡಿ.ವೈ. ಹುನಗುಂದ, ಅಶೋಕ ಶಿರಹಟ್ಟಿ, ರಾಜು ಓಲೇಕಾರ, ರಾಮಣ್ಣ ಲಮಾಣಿ(ಶಿಗ್ಲಿ), ನಾಗಪ್ಪ ತಂಬ್ರಳ್ಳಿ, ನಾಗರಾಜ ಬೆಳವಿಗಿ, ಮಂಜುನಾಥ ಗುಂಡಮಿ, ಶಿವಯೋಗಿ ಹಿರೇಮಠ, ಶಿವಯ್ಯ ಪೂಜಾರ, ಮಂಜುನಾಥ ಬೀಳಗಿ, ರಾಘವೇಂದ್ರ ಅಸುಂಡಿ ಇತರರು ಪಾಲ್ಗೊಂಡಿದ್ದರು.