

ಹುಬ್ಬಳ್ಳಿ: ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಧಾರವಾಡ ಜಿಲ್ಲೆಯ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಸೆ. 12ರಂದು ಧಾರವಾಡ ನಗರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವರು ಎಂದು ಬಸವ ಸಂಸ್ಕೃತಿ ಅಭಿಯಾನ ಸ್ವಾಗತ ಸಮಿತಿ ಧಾರವಾಡ ಜಿಲ್ಲಾ ಅಧ್ಯಕ್ಷ ಜಿ.ಬಿ. ಕೊಂಗವಾಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಸವಾದಿ ಶರಣರ ತತ್ವಗಳನ್ನು ಜನಮಾನಸದಲ್ಲಿ ಬಿತ್ತುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಅಂದು ಬೆಳಗ್ಗೆ 11ಕ್ಕೆ ಧಾರವಾಡದ ಕೆಎಲ್ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ, ಮಧ್ಯಾಹ್ನ 3.30ಕ್ಕೆ ಧಾರವಾಡ ನಗರದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಿಂದ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮತ್ತು ಧರ್ಮಗ್ರಂಥ ವಚನ ಸಾಹಿತ್ಯದ ಮೆರವಣಿಗೆ ಹಾಗೂ ಪಾದಯಾತ್ರೆ ನಡೆಯಲಿದೆ ಎಂದರು.
ಮುರಘಾಮಠದವರೆಗೆ ಪಾದಯಾತ್ರೆ ಸಾಗಲಿದೆ. ಸಂಜೆ 6ಕ್ಕೆ ಧಾರವಾಡದ ಮುರಘಾಮಠದ ಸಭಾಭವನದಲ್ಲಿ ಸಾರ್ವಜನಿಕ ಸಮಾರಂಭ ಮತ್ತು ರಾತ್ರಿ 8.30ಕ್ಕೆ ಸಾಣೆಹಳ್ಳಿಯ ಶಿವಸಂಚಾರ ತಂಡದಿಂದ ಜಂಗಮದೆಡೆಗೆ ನಾಟಕ ಪ್ರದರ್ಶನ ಜರುಗಲಿದೆ ಎಂದರು.
ಸೆಪ್ಟೆಂಬರ್ 1ರಿಂದ ಅಕ್ಟೋಬರ್ 1 ರವರೆಗೆ ನಾಡಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಸವ ಸಂಸತಿ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಲಿಂಗಾಯತ ಧರ್ಮ ಎಂದು ಪರಿಗಣಿಸಿದೆ. ಇಂತಹ ಸಂದರ್ಭದಲ್ಲಿ ಲಿಂಗಾಯತದೊಂದಿಗೆ ವೀರಶೈವ ಸೇರ್ಪಡೆ ಮಾಡುವುದು ಸರಿಯಲ್ಲ. ಜೈನ್, ಬೌದ್ಧ ಧರ್ಮದಂತೆ ಲಿಂಗಾಯತ ಅಲ್ಪಸಂಖ್ಯಾತ ಧರ್ಮ ಎಂದು ಕೊಂಗವಾಡ ಪ್ರತಿಪಾದಿಸಿದರು.
ಬಸವಂತಪ್ಪ ತೋಟದ, ಸಿ.ಜಿ. ಪಾಟೀಲ್, ಪ್ರೊ. ಜಿ.ಬಿ. ಹಳ್ಯಾಳ, ಶಿವಲಿಂಗಪ್ಪ ಜೋಡಳ್ಳಿ, ದಾಕ್ಷಾಯಿಣಿ ಕೋಳಿವಾಡ, ಸ್ನೇಹಾ ಭೂಸನೂರ ಗೋಷ್ಠಿಯಲ್ಲಿದ್ದರು.