ಬಸರಾಳಿನಲ್ಲಿ ಪಟ್ಟಲದಮ್ಮ ಜಾತ್ರಾ ವೈಭವ: ಸಹಸ್ರಾರೂ ಭಕ್ತರ ಸಮ್ಮುಖದಲ್ಲಿ ಅಗ್ನಿ ಕೊಂಡೋತ್ಸವ

Hongetalu Pattaladamma Habha Mandya
Published on

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ಶಕ್ತಿದೇವತೆ ಆದಿಶಕ್ತಿ ಹೊಂಗೆತಾಳು ಪಟ್ಟಲದಮ್ಮನ ಎರಡು ದಿನದ ಜಾತ್ರಾ ಮಹೋತ್ಸವ ಭಕ್ತಿಪೂರ್ವಕವಾಗಿ ನೆರವೇರಿತು.
ಶುಕ್ರವಾರ ಮುಂಜಾನೆ ದೇವಿಗೆ ಪುಣ್ಯಾಹ ಪಂಚಾಮೃತ ಅಭಿಷೇಕ, ವಿವಿಧ ಬಗೆಯ ಹೂಗಳ ಅಲಂಕಾರ ಹಾಗೂ ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿತು. ನಂತರ ಭಕ್ತರಿಗೆ ತುಪ್ಪದ ಆರತಿ, ಮಡೆ ಆರತಿ, ತುಂಬಿಟ್ಟಿನ ಆರತಿ ನೆರವೇರಿಸಲು ಅವಕಾಶ ಮಾಡಿಕೊಡಲಾಯಿತು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ನೆರವೇರಿಸಿ ದೇವಿಯ ದರ್ಶನ ಪಡೆದರು. ಮಧ್ಯರಾತ್ರಿ ಗ್ರಾಮದ ಮಠದ ಮನೆಯಿಂದ ಪಟ್ಟಲದಮ್ಮನ ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಲಾಯಿತು.
ಮಂಗಳವಾದ್ಯದೊಂದಿಗೆ ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಆರತಿ ಸ್ವೀಕರಿಸಿ ಮಂಡ್ಯ-ನಾಗಮಂಗಲ ಮುಖ್ಯರಸ್ತೆ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಬಳಿಕ ಗ್ರಾಮದ ಹೊರಭಾಗದಲ್ಲಿರುವ ದೇವಸ್ಥಾನದ ಬಳಿ ಭಕ್ತರು ಏರ್ಪಡಿಸಿದ್ದ ಮಡೆ ಪೂಜೆ ನೈವೇದ್ಯ ಸ್ವೀಕರಿಸಿ ಶನಿವಾರ ಮುಂಜಾನೆ ಅಗ್ನಿಕೊಂಡದ ಬಳಿಗೆ ಉತ್ಸವ ಆಗಮಿಸಿತು. ಉತ್ಸವ ಮೂರ್ತಿಯನ್ನು ಹೊತ್ತ ದೇವರ ಗುಡ್ಡಪ್ಪ ದೇವಸ್ಥಾನದ ಬಳಿಗೆ ಆಗಮಿಸುತ್ತಿದ್ದಂತೆ ಭಕ್ತರ ಜಯ ಘೋಷ ಮೊಳಗಿತು. ನಂತರ ಅಗ್ನಿಕೊಂಡ ಹಾಯ್ದು ಜಾತ್ರೆಯನ್ನು ಸಂಪನ್ನಗೊಳಿಸಲಾಯಿತು.
ನೂರಾರು ವರ್ಷದ ಸಂಪ್ರದಾಯದಂತೆ ಮನುಗನಹಳ್ಳಿ ಗ್ರಾಮಸ್ಥರು ತಮ್ಮ ಊರ ಗುಡ್ಡದಮೇಲೆ ನಿಂತು ಬಸರಾಳು ಗ್ರಾಮದೇವತೆ ಉತ್ಸವವು ದೇವಸ್ಥಾನದ ಬಳಿಗೆ ಆಗಮಿಸುತ್ತಿದ್ದಂತೆ ಆರತಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಂಬು, ಜಾಗಟೆ, ಕಹಳೆ, ತಮಟೆಯನ್ನು ಮೊಳಗಿಸಲಾಯಿತು. ಬಸರಾಳು, ಗುಂಡಾಪುರ ಸೇರಿದಂತೆ ಸುತ್ತಮುತ್ತಲ 24 ಹಳ್ಳಿಯ ಭಕ್ತರು ದೇವಿಯ ದರ್ಶನ ಪಡೆದರು. ಹಬ್ಬದ ಅಂಗವಾಗಿ ದೇವಸ್ಥಾನ ಹಾಗೂ ಬಸರಾಳು ಬಸ್ ನಿಲ್ದಾಣದಿಂದ ಗ್ರಾಮದ ಹೊರಭಾಗದಲ್ಲಿರುವ ದೇವಸ್ಥಾನದವರೆಗೆ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net