

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ಪುರಾಣ ಪ್ರಸಿದ್ಧ ಕಾಲಭೈರವೇಶ್ವರಸ್ವಾಮಿ ಹಬ್ಬ ಮತ್ತು ಜಾತ್ರೆ ಸೋಮವಾರ ಬೆಳಗ್ಗೆ ಕೊಂಡ ಹಾಯುವ ಮೂಲಕ ಸಂಪನ್ನಗೊಂಡಿತು. ಇದರೊಂದಿಗೆ ಒಂದು ವಾರದಿಂದ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮ ತೆರೆ ಕಂಡಿತು.
ಗುರುವಾರ ಚಂದ್ರಮಂಡಲ ಉತ್ಸವ, ಶುಕ್ರವಾರ ಗರಿ ವಾಹನೋತ್ಸವ, ಭಾನುವಾರ ದೇವಾಲಯದಲ್ಲಿ ಹೂವಿನ ಚಪ್ಪರ ಹಾಕಿದ ನಂತರ ಮಧ್ಯರಾತ್ರಿ 12 ಗಂಟೆಗೆ ಹೊರಟ ಕಾಲಭೈರವೇಶ್ವರ ಸ್ವಾಮಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದು ಬೆಳಗಿನ ಜಾವ 4 ಗಂಟೆಗೆ ದೇವಸ್ಥಾನದ ಬಳಿಗೆ ಆಗಮಿಸಿತು. ಅಪಾರ ಸಂಖ್ಯೆಯ ಭಕ್ತರ ಜಯಘೋಷದ ನಡುವೆ ರಥೋತ್ಸವ ಯಶಸ್ವಿಯಾಗಿ ನಡೆಯಿತು. ರಥಕ್ಕೆ ತೆಂಗಿನಕಾಯಿ ಎಸೆಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಸಲ್ಲಿಸಿ ಸಂತೃಪ್ತರಾದರು.
ಭಾನುವಾರ ಬೆಳಗ್ಗೆಯಿಂದಲೇ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ, ಹೋಮಹವನ ಮಾಡಲಾಯಿತು. ದೇವರ ವಿಗ್ರಹ ಸೇರಿದಂತೆ ಇಡೀ ದೇವಾಲಯದ ಪ್ರಾಂಗಣವನ್ನು ಹೂಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಮಠದ ಮನೆಯಿಂದ ಹೊರಟ ಉತ್ಸವ ಮೂರ್ತಿ ಮಂಗಳವಾದ್ಯದೊಂದಿಗೆ ಹೊರಟು ಹೊರವಲಯದಲ್ಲಿರುವ ಗಿಂಡಿ ಆಲದ ಮರಕ್ಕೆ ಸಂಪ್ರದಾಯ ಬದ್ಧವಾಗಿ ಪೂಜೆ ಸಲ್ಲಿಸಿ, ಹತ್ತಿಯ ಹುಂಡೆಗೆ ಚಕಮಕಿ ಕಲ್ಲುಗಳಿಂದ ಕಿಡಿ ಹೊತ್ತಿಸಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ 12 ಮಾರು ಉದ್ದದ ಕೊಂಡಕ್ಕೆ ಹತ್ತಿ ಉಂಡೆಯ ಸಹಾಯದಿಂದ ಅಗ್ನಿಸ್ಪರ್ಶ ಮಾಡಲಾಯಿತು. ಈ ವೇಳೆ ಭಕ್ತರು ಜಯಘೋಷಗಳನ್ನು ಮೊಳಗಿಸಿ ಕುಣಿದು ಕುಪ್ಪಳಿಸಿದರು.
ರಾತ್ರಿ 7 ಗಂಟೆಯಿಂದ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು. ಮಧ್ಯರಾತ್ರಿ ಕಟ್ಟೆ ತಿಮ್ಮಪ್ಪನ ನವಿಲು ಉತ್ಸವ ಹಾಗೂ ಕಾಲಭೈರವೇಶ್ವರ ಸ್ವಾಮಿಯ ಜೋಡಿ ಉತ್ಸವಗಳನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಸ್ತೆಯುದ್ದಕ್ಕೂ ಭಕ್ತರು ಈ ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಿದರು. ಇಡೀ ರಾತ್ರಿ ದೇವಸ್ಥಾನದ ಆವರಣದಲ್ಲಿ ಜಾನಪದ ಶೈಲಿಯ ರಂಗ ಕುಣಿತ, ಗುಂಡು ಎತ್ತುವುದು ಹಾಗೂ ಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು. ಸೋಮವಾರ ಬೆಳಗಿನ ಜಾವ ಕಾಲಭೈರೇಶ್ವರ ಸ್ವಾಮಿಯ ಕೊಂಡಕ್ಕೆ ಅನ್ನಪ್ರಸಾದ ನೈವೇದ್ಯ ನೀಡಿ ಪೂಜೆ ಸಲ್ಲಿಸಲಾಯಿತು. 15 ದಿನಗಳಿಂದ ಉಪವಾಸ ವ್ರತ ಕೈಗೊಂಡಿದ್ದ ಏಳು ಜನ ದೇವರ ಗುಡ್ಡಪ್ಪಗಳು ಕೊಂಡವನು ಯಶಸ್ವಿಯಾಗಿ ಹಾಯುವ ಮೂಲಕ ಜಾತ್ರೆ ಮುಕ್ತಾಯಗೊಂಡಿತು.
ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಮಡೆ ಆರತಿ, ತಂಬಿಟ್ಟಿನ ಆರತಿ, ಬಾಯಿ ಬೀಗ, ಮುಡಿಸೇವೆ, ಕೊಂಡಕ್ಕೆ ಹರಳು ಹಾಕುವುದು ಸೇರಿದಂತೆ ವಿವಿಧ ಬಗೆಯ ಸೇವೆಗಳನ್ನು ಸಲ್ಲಿಸಿದರು. ಹಬ್ಬದ ಅಂಗವಾಗಿ ಮಲ್ಲಿಕಾರ್ಜುನಸ್ವಾಮಿ, ಬಸವೇಶ್ವರಸ್ವಾಮಿ, ಲಕ್ಷ್ಮೀನಾರಾಯಣಸ್ವಾಮಿ, ಕೊಲ್ಲಾಪುರದಮ್ಮ, ಕೋಟೆ ಬಾಗಿಲು ಆಂಜನೇಯ ಸ್ವಾಮಿ, ಮಂಚಮ್ಮ ದೇವಾಲಯ, ಮಠದ ಮನೆ ಸೇರಿದಂತೆ ಮಂಡ್ಯ-ನಾಗಮಂಗಲ ರಸ್ತೆ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಆಗಮಿಸಿದ್ದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಅಂತೆಯೇ ದೇವಸ್ಥಾನಕ್ಕೆ ಬರುವ ಭಕ್ತರು ಉಳಿದುಕೊಳ್ಳಲು ಹೊಸದಾಗಿ ನಿರ್ಮಾಣ ಮಾಡಿದ ಅತಿಥಿಗೃಹವನ್ನು ಉದ್ಘಾಟಿಸಲಾಯಿತು.