

ಉಪ್ಪಿನಂಗಡಿ : ಜನ ವಸತಿಯಿರುವ ಪ್ರದೇಶದಲ್ಲಿ ರುದ್ರಭೂಮಿಗೆ ಜಾಗ ಗುರುತಿಸಿದ ವಿಚಾರ ನಿನ್ನೆ ಬಾರ್ಯ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಪಂಚಾಯಿತಿ ಆಡಳಿತ ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿ ಉದ್ವಿಗ್ನ ಸ್ಥಿತಿ ಉಂಟಾಯಿತು. ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಸ್ಥಳದಲ್ಲಿದ್ದ ಪೊಲೀಸರು ಹರಸಾಹಸದಿಂದ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್ ನೋಡಲ್ ಅಧಿಕಾರಿಯಾಗಿ, ಗ್ರಾ.ಪಂ ಅಧ್ಯಕ್ಷ ಪಿ.ಕೆ ಉಸ್ಮಾನ್ ಉಪಸ್ಥಿತಿಯಲ್ಲಿ ಸಮುದಾಯ ಭವನದಲ್ಲಿ ಗ್ರಾಮಸಭೆ ಜರುಗಿದೆ. ಆರಂಭದಲ್ಲಿ ಪಿಡಿಒ ಜಯಕೀರ್ತಿ ಲೆಕ್ಕಪತ್ರಕ್ಕೆ ಮಂಜೂರಾತಿ ಪಡೆದರು.
ತಾಪಂ ಮಾಜಿ ಸದಸ್ಯ ಮಂಜುನಾಥ ಸಾಲ್ಯಾನ್ ಪುತ್ತಿಲ ಗ್ರಾಮದ ಪಿಲ್ಯ ಚೀಮುಳ್ಳು ಎಂಬಲ್ಲಿ 45 ಸೆಂಟ್ಸ್ ಜಾಗ ಹಿಂದು ರುದ್ರಭೂಮಿಗೆ ಗುರುತಿಸಿರುವುದು ತಪ್ಪು. ಇದು ಜನವಸತಿ ಪ್ರದೇಶವಾಗಿದ್ದು, ಖಾಸಗಿಯವರ ಕುಮ್ಮಿ ಜಾಗವಾಗಿದೆ. ದಿಢೀರ್ ಎಂದು ಅಲ್ಲಿ ಸ್ಮಶಾನ ನಿರ್ಮಿಸಲು ಜಾಗ ಗುರುತಿಸಿರುವುದು ಸರಿಯಲ್ಲವೆಂದು ವಾದಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರುಮ, 20 ವರ್ಷಗಳ ಹಿಂದೆ ರುದ್ರಭೂಮಿಗೆ ಕೋರಿಕೆ ಇತ್ತು. ಅದರಂತೆ ಇತ್ತೀಚೆಗೆ ಜಾಗ ಗುರುತಿಸಿದ್ದೆವು. ಈ ಕುರಿತಂತೆ ಖಾಸಗಿಯವರು ನ್ಯಾಯಲಯದ ಮೊರೆ ಹೋಗಿದ್ದಾರೆ. ಅದರಂತೆ ಪ್ರಕರಣ ನ್ಯಾಯಲಯದಲ್ಲಿರುವ ಕಾರಣ ಮಾತನಾಡುವ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು
ಆಗ ಗ್ರಾಮಸ್ಥರು ಚರ್ಚೆಗೆ ಇಳಿದು ಪರ ವಿರೋಧ ವಾಗ್ವಾದ ನಡೆದು ಪರಿಸ್ಥಿತಿ ಬಿಗಾಡಾಯಿಸಿತು. ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಸ್ಥಳದಲ್ಲಿದ್ದ ಪೋಲಿಸರು ಇತ್ತಂಡವನ್ನು ಚದುರಿಸಿ ಹತೋಟಿಗೆ ತಂದರು.
ಬಾರ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುತ್ತಿಲ ಗ್ರಾಮದ ಪಿಲ್ಯ-ಚೀಮುಳ್ಳು ಎಂಬಲ್ಲಿ ಸರ್ವೇ ನಂಬ್ರ 66/1ರಲ್ಲಿ 40 ಸೆಂಟ್ಸ್ ಜಾಗವನ್ನು ಹಿಂದು ರುದ್ರಭೂಮಿಗೆ ಕಾಯ್ದಿರಿಸಿದ್ದು, ಈ ಜಾಗದ ಸಮೀಪ ಕೆಲ ನಿವಾಸಿಗಳ ಖಾಸಗಿ ಸ್ಥಳ ಹಾಗೂ ದೈವ-ದೇವರುಗಳ ಸಾನ್ನಿಧ್ಯ ಇರುವುದರಿಂದ ಈ ಜಾಗವನ್ನು ಹೊರತುಪಡಿಸಿ ಬೇರೆ ಸರ್ಕಾರಿ ಜಾಗದಲ್ಲಿ ಸ್ಥಳವನ್ನು ಗುರುತಿಸಬೇಕು ಎಂದು ಶಶಿಧರ್ ಪಿಲ್ಯ ವಿನಂತಿಸಿದರು.
ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಪೈ ಬಾರ್ಯ, ಸಿಎ ಬ್ಯಾಂಕ್ ಅಧ್ಯಕ್ಷ ಪ್ರವೀಣ ರೈ, ಗ್ರಾಮಸ್ಥರಾದ ಪ್ರಸನ್ನ ಶೇಖರ ಕುಂಡಡ್ಕ, ಅಣ್ಣು ಪೂಜಾರಿ, ಜೋರಾಂ ಬಾಕ್ಸ ದಯಾನಂದ, ಶಶಿಧರ ಪಿಲ್ಯ, ಸಮದ್, ನಾಸೀರುದ್ದೀನ್, ಸದಸ್ಯರಾದ ಉಷಾ ಶರತ್, ನವೀನ್ ಪ್ರಸಾದ್, ಕೆ.ಎಲ್ ಜಯಂತಿ, ಧರ್ಣಪ್ಪ ಗೌಡ, ಬಾಲಕೃಷ್ಣ ಶೆಟ್ಟಿ, ಜಯಶ್ರೀ, ಪವಿತ್ರ ಕಮಲಾಕ್ಷ ವಸಂತ, ನಾಝೀಯಾ ಕೆ, ಪುಷ್ಪಾ ಸರೋಜಿನಿ, ಅನುರಾಗ್, ಮಹಮ್ಮದ್ ಪೈಝಲ್ ಉಪಸ್ಥಿತರಿದ್ದರು. ಗ್ರಾಪಂ ಕಾರ‌್ಯದರ್ಶಿ ಶೀಲಾ ಎಸ್ ಕಾರ್ಯಕ್ರಮ ನಿರೂಪಿಸಿದರು.
ಕೇರ್ಯ, ಕುಂಡಡ್ಕ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಹೊಳೆ ದಾಟಿ ಹೋಗುವ ಪರಿಸ್ಥಿತಿ ಇದೆ. ಕಾಲುಸಂಕ ಯೋಗ್ಯವಾಗಿಲ್ಲ ಇಲಾಖೆ ಗಮನ ಹರಿಸಬೇಕು , ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಬರುತ್ತಿಲ್ಲ, ಮಾತೃವಂದನ ಯೋಜನೆಗೆ ಅರ್ಜಿ ಸಲ್ಲಿಸಿ 9 ತಿಂಗಳ ಕಳೆದರೂ ಹಣ ಜಮೆಯಾಗಿಲ್ಲ. ಕಾನ ಎಂಬಲ್ಲಿಗೆ ಅಂಗನವಾಡಿ ಕೇಂದ್ರ ಮಂಜೂರಾಗಿದೆ. ಸರಳೀಕಟ್ಟೆ-ಗೋವಿಂದಗುರಿ 100ಮೀಟರ್ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದೆ ಎಂದೆಲ್ಲ ಸಮಸ್ಯೆಗಳನ್ನು ಪ್ರಸ್ತಾಪಿಸಲಾಯಿತು.