

ನಂಜನಗೂಡು: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಾಲೂಕು ಆಡಳಿತ ವಿರುದ್ಧ ಸೋಮವಾರ ಬೃಹತ್ ಬಾರುಕೋಲು ಚಳವಳಿ ನಡೆಯಿತು.
ರೈತ ಸಂಘದ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ರಾಮೇಗೌಡ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ನೂರಾರು ರೈತರು, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಪಟ್ಟಣದ ರಾಷ್ಟ್ರಪತಿ ರಸ್ತೆ ಮೂಲಕ ತಾಲೂಕು ಕಚೇವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಸಾರ್ವಜನಿಕರು ಹಾಗೂ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಉಳ್ಳವರು, ದುಡ್ಡು ಕೊಟ್ಟವರ ಕೆಲಸ ಆಗುತ್ತಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಜೂರಾತಿ ಹಾಗೂ ಸರ್ಕಾರಿ ಜಮೀನನ್ನು ದುರಸ್ತಿ ಮಾಡಿ ಹೊಸ ಸರ್ವೇ ನಂಬರ್ ರಚನೆ ಮಾಡುವಂತೆ ಆದೇಶ ಮಾಡಿದ್ದರೂ ತಾಲೂಕು ಆಡಳಿತ ಕಡತ ಕಳೆದುಹೋಗಿದೆ ಎಂಬ ಕಾರಣ ನೀಡಿ ಜಮೀನುಗಳನ್ನು ದುರಸ್ತಿ ಪಡಿಸಿಲ್ಲ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಕಿಡಿಕಾರಿದರು.
ಪ್ರತಿ ವರ್ಷ ಎರಡು ಕೋಟಿಗೂ ಹೆಚ್ಚು ಉದ್ಯೋಗ ನೀಡುತ್ತೇವೆ ಎಂದು ಹೇಳಿದ ಪ್ರಧಾನಿ ಮೋದಿ ಅವರು ಯಾಕೆ ಯುವಕ ಯುವತಿಯರಿಗೆ ಉದ್ಯೋಗ ನೀಡಿಲ್ಲ. ಕೂಡಲೇ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕು. ಸಕ್ಕರೆ ಕಾರ್ಖಾನೆಗೆ ಪೂರೈಕೆ ಮಾಡುವ ಕಬ್ಬಿಗೆ ಕನಿಷ್ಠ 5,000 ರೂ.ಬೆಲೆ ನಿಗದಿ ಮಾಡಬೇಕು. ಕಬ್ಬಿನ ಉಪ ಉತ್ಪನ್ನದಿಂದ ಬರುವ ಸರ್ಕಾರಿ ತೆರಿಗೆಯಿಂದ ರೈತರಿಗೆ ಕನಿಷ್ಠ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 1000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ 3500 ರೂ.ನಿಗದಿ ಮಾಡಿ ಪ್ರತಿ ವರ್ಷವೂ ಖರೀದಿ ಕೇಂದ್ರದ ಮುಖಾಂತರ ಸರ್ಕಾರವೇ ಭತ್ತವನ್ನು ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಫಾರಂ ನಂ. 53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿರುವ ಭೂ ಉಳುಮೆದಾರರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು. ಅನಧಿಕೃತ ಸಾಗುವಳಿಯನ್ನು ರದ್ದು ಪಡಿಸಬೇಕು. ಕಾಡು ಪ್ರಾಣಿಗಳಿಂದ ರೈತರು ನಿತ್ಯ ಮೃತಪಡುತ್ತಿದ್ದು, ಜೀವ ಹಾನಿಗೆ ಕನಿಷ್ಠ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಒತ್ತುವರಿಯಾಗಿರುವ ಕೆರೆಕಟ್ಟೆ, ಕಾಲುವೆ, ಸರ್ಕಾರಿ ರಸ್ತೆಗಳನ್ನು ತೆರವುಗೊಳಿಸಿ ಪ್ರತಿ ಗ್ರಾಮದಲ್ಲಿಯೂ ಸ್ಮಶಾನ ಭೂಮಿಯನ್ನು ಕಲ್ಪಿಸಿಕೊಡಬೇಕೆಂಬ ಹಕ್ಕೋತ್ತಾಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ. ಸ್ಥಳಕ್ಕೆ ತಹಸೀಲ್ದಾರ್. ಜಿಲ್ಲಾಧಿಕಾರಿ ಬರುವ ತನಕ ನಾವು ಸ್ಥಳವನ್ನು ಬಿಟ್ಟು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಳಿಕ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸನೂರು ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಪತ್ರ ಪಡೆದು ಮಾತನಾಡಿ, ರೈತರ ಕಷ್ಟಗಳ ಬಗ್ಗೆ ನನಗೂ ಅರಿವಿದೆ. ಇನ್ನು ಮುಂದೆ ಹಂತ ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಸತೀಶ್‌ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಕೃಷ್ಣಾಪುರ ಮೋಹನ್, ಹೆಡತಲೆ ಶಂಕರನಾಯಕ, ರಂಗಸ್ವಾಮಿ ನಾಯಕ, ಮಹದೇವನಾಯಕ, ಶ್ವೇತಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.