

ಉಳ್ಳಾಲ: ಬ್ಯಾರಿ ಕ್ಷೇತ್ರ ಕಾರ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆ ನಡೆದಿದ್ದು, ಇನ್ನಷ್ಟು ಸಂಶೋಧನೆ ನಡೆಯಬೇಕಿದೆ. ಸಂಶೋಧನೆಗೆ ಮುಂದಾಗುವವರಿಗೆ ಪ್ರೋತ್ಸಾಹ ಅಗತ್ಯ ಎಂದು ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಹೇಳಿದರು.
ಬ್ಯಾರಿ ಲೇಖಕರು, ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ವತಿಯಿಂದ ದೇರಳಕಟ್ಟೆಯ ಎಸ್‌ಕೆಎಸ್‌ಎಸ್‌ಎಫ್ ಶಾಖಾ ಕಚೇರಿಯಲ್ಲಿ ಗುರುವಾರ ಬ್ಯಾರಿ ಭಾಷಾ ದಿನ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬ್ಯಾರಿ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಅಧ್ಯಯನ ನಡೆಸುತ್ತಿರುವುದು ಕಂಡುಬರುತ್ತಿದೆ. ಸಂಶೋಧನೆ ಸಂದರ್ಭ ಅವರು ಮಂಡಿಸುವ ಅಭಿಪ್ರಾಯದ ಬಗ್ಗೆ ಮುಕ್ತವಾಗಿ ಮತ್ತು ಆರೋಗ್ಯಕರವಾಗಿ ಚರ್ಚೆ ನಡೆಸಬೇಕೇ ವಿನಃ ಅವರ ಅಭಿಪ್ರಾಯವನ್ನು ಸಾರಾ ಸಗಟಾಗಿ ತಳ್ಳಿಹಾಕುವುದು ಅಥವಾ ಸಂಶಯದ ದಷ್ಟಿಯಿಂದ ನೋಡುವುದು ಸರಿಯಲ್ಲ ಎಂದರು.
ಮೇಲ್ತೆನೆ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಕೆಎಸ್‌ಎಸ್‌ಎಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಡಿ.ಎಂ.ಫೈಝಲ್, ಮೇಲ್ತೆನೆಯ ವಾಜಿ ಅಧ್ಯಕ್ಷ ಇಸ್ಮಾಯಿಲ್, ಹಂಝ ಮಲಾರ್, ಅಬ್ದುಲ್ ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು.
ಕೋಶಾಧಿಕಾರಿ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಅಶ್ರಫ್ ಡಿ.ಎ. ನಿರೂಪಿಸಿದರು. ಮುಹಮ್ಮದ್ ಬಾಷಾ ನಾಟೆಕಲ್ ವಂದಿಸಿದರು.