ಅಕೇಶಿಯಾ, ನೀಲಗಿರಿ ನೆಡುತೋಪಿಗೆ ತಡೆ; ಚೂರಿಕಟ್ಟೆ ಬಳಿ ಸಸಿ ನೆಡುವುದಕ್ಕೆ ವಿರೋಧ

3 talaguppa 04
ತಾಳಗುಪ್ಪ ಸಮೀಪದ ಚೂರಿಕಟ್ಟೆಯ ಬಳಿ ಅರಣ್ಯ ಇಲಾಖೆಯ ನಡುತೋಪಿನಲ್ಲಿ ಅಕೇಶಿಯಾ ಗಿಡಗಳನ್ನು ನೆಡಬಾರದೆಂದು ಆಗ್ರಹಿಸಿ ರೈತಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಉಳುಮೆ ಮಾಡುತ್ತಿರುವ ಇಲಾಖೆಯ ಟ್ರ್ಯಾಕ್ಟರ್ ತಡೆದು ಪ್ರತಿಭಟನೆ ನಡೆಸಿದರು. ಗೂರಲಕೆರೆ ಚಂದ್ರಶೇಖರ್, ಪ್ರಕಾಶ್ ಗೂರಲಕೆರೆ, ಪೂರ್ಣಿಮಾ ನವಿಲೆಮನೆ, ರಾಜೇಂದ್ರ ಗಾಲಿಮನೆ ಇತರರಿದ್ದರು.
Published on

ತಾಳಗುಪ್ಪ: ಸಮೀಪದ ಚೂರಿಕಟ್ಟೆಯ ಬಳಿ ನೆಡುತೋಪಿನಲ್ಲಿ ಅಕೇಶಿಯಾ ಮತ್ತು ನೀಲಗಿರಿ ಗಿಡ ನೆಡಬಾರದೆಂದು ಆಗ್ರಹಿಸಿ ರೈತಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಉಳುಮೆ ಮಾಡುತ್ತಿದ್ದ ಎಂಪಿಎಂ ಟ್ರ್ಯಾಕ್ಟರ್ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಗೂರಲಕೆರೆ ಚಂದ್ರಶೇಖರ್ ಮಾತನಾಡಿ, ಈ ಭಾಗದಲ್ಲಿ ಅಕೇಶಿಯಾ, ನೀಲಗಿರಿ ಗಿಡಗಳನ್ನು ನೆಟ್ಟು ಪರಿಸರಕ್ಕೆ ಮಾರಕವಾದ ಕೆಲಸ ಮಾಡುತ್ತಿರುವ ಎಂಪಿಎಂ ನಡೆ ಖಂಡನೀಯ. ಇದೀಗ ಪ್ರತಿಭಟನೆ ನಡೆಸುವ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದೆ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದರು.
ಎಂಪಿಎಂ ನಮ್ಮ ಭಾಗದ ಸಹಜ ಅರಣ್ಯ ಸರ್ವನಾಶ ಮಾಡುತ್ತಿದೆ. ಈ ಭಾಗದ ರೈತರಿಗೆ ಸೊಪ್ಪು ಹಾಗೂ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಎರಡು ಕಟಾವು ಮಾಡಿ ಮೂರನೇ ಕಟಾವಿಗೆ ಗಿಡ ನೆಡಲು ಸಿದ್ಧತೆ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಪರಿಸರವಾದಿ ಪೂರ್ಣಿಮಾ ನವಿಲೆಮನೆ ಮಾತನಾಡಿ, ಈ ಭಾಗದ ಕೆರೆ ಕುಂಟೆಗಳು ಈ ಹೈಬ್ರೀಡ್ ಅಕೇಶಿಯಾ ಗಿಡಗಳ ಹಾವಳಿಯಿಂದ ಬತ್ತಿ ಹೋಗಿವೆ. ರೈತರಿಗೆ ಈ ಅಸಹಜ ಅರಣ್ಯದಿಂದ ಅಪಾರ ನಷ್ಟವಾಗುತ್ತಿದೆ. ಸರ್ಕಾರ ರೈತಸ್ನೇಹಿ ಕೆಲಸ ಮಾಡಬೇಕು. ಪಶು, ಪಕ್ಷಿಗಳ ಸಹಜ ನಡವಳಿಕೆಗೆ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಪ್ರಕಾಶ್ ಗೂರಲಕೆರೆ ಮಾತನಾಡಿ, ಬಿಕ್ಕೆ, ಸಳ್ಳೆ, ನಂದಿ ಮುಂತಾದ ಪಶ್ಚಿಮ ಘಟ್ಟಗಳ ಸಹಜ ಅರಣ್ಯವನ್ನು ಕಡಿದು ಅಕೇಶಿಯಾ ನೆಡುತ್ತಿರುವ ಹಾಗೂ ಬೇಸಿಗೆಯಲ್ಲಿ ಅವೈಜ್ಞಾನಿಕವಾಗಿ ಇಡೀ ಗುಡ್ಡಕ್ಕೆ ಬೆಂಕಿ ಹಾಕಿ ನೂರಾರು ಸರೀಸೃಪ, ಹರಿಣಿಗಳ ಸಾವಿಗೆ ಕಾರಣವಾಗುವ ಎಂಪಿಎಂ ವಿರುದ್ಧ ಚಳವಳಿ ಮಾಡಬೇಕಾಗಿದೆ ಎಂದು ಕಿಡಿಕಾರಿದರು.
ರಾಜೇಂದ್ರ ಗಾಲಿಮನೆ, ರಾಘವೇಂದ್ರ ಚೂರಿಕಟ್ಟೆ, ಶ್ರೀಕಾಂತ ಗುಡ್ಡೇಮನೆ, ತಾಳಗುಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಗಣಪತಿ, ಕನ್ನಮ್ಮ ಗೊಣೂರು ಇತರರಿದ್ದರು. ಬಳಿಕ ಟ್ರಾೃಕ್ಟರ್ ವಾಪಸ್ ಕಳುಹಿಸಲಾಯಿತು.

ಏನಿದು ಪ್ರಕರಣ?
1980ರಲ್ಲಿ ಸರ್ಕಾರ ಚೂರಿಕಟ್ಟೆ ಸಮೀಪದ ಹಿರೇಮನೆ ಗ್ರಾಮದ ಸರ್ವೆ ನಂ.171ರಲ್ಲಿ 18 ಹೆಕ್ಟೇರ್ ಪ್ರದೇಶವನ್ನು ಎಂಪಿಎಂಗೆ ನೀಡಿತ್ತು. ಆ ಜಾಗದಲ್ಲಿ ಮೂವತ್ತು ವರ್ಷದಿಂದ ಹೈಬ್ರೀಡ್ ಅಕೇಶಿಯಾ, ನೀಲಗಿರಿ ಬೆಳೆಯಲಾಗುತ್ತಿದ್ದು, ಈವರೆಗೆ ಎರಡು ಕಟಾವ್ ಆಗಿದೆ. ಇದೀಗ ಮೂರನೇ ಕಟಾವ್ ಮಾಡಲು ಸಿದ್ಧತೆಯಾಗಿ ಟ್ರಾೃಕ್ಟರ್ ಹೊಡೆಸಲಾಗಿತ್ತು. ಈ ಜಾಗದ ಕೆಲವು ಭಾಗ ನಮಗೆ ಸೇರಿದ್ದು ಎಂದು ಮಂಜಿನಕಾನು ಗ್ರಾಮದ ರೈತರು ಕೋರ್ಟ್‌ಗೆ ಸಹ ಹೋಗಿದ್ದಾರೆ. ಆ ಜಾಗವನ್ನು ಹಾಗೆಯೇ ಬಿಟ್ಟ ಎಂಪಿಎಂನ ಅರಣ್ಯ ಅಧಿಕಾರಿಗಳು ಮಿಕ್ಕ ಜಾಗದಲ್ಲಿ ಟ್ರ್ಯಾಕ್ಟರ್ ಮೂಲಕ ಗಿಡ ನೆಡಲು ಸಿದ್ಧತೆ ಮಾಡುತ್ತಿದ್ದಾರೆ.

2020ರಿಂದ ನಲವತ್ತು ವರ್ಷ ನಮಗೆ ಜಾಗವನ್ನು ಸರ್ಕಾರ ಗುತ್ತಿಗೆಗೆ ನೀಡಿದೆ. ಈಗ ನಾವು ಹೊಸದಾಗಿ ಯಾವುದೇ ಗಿಡ ನೆಡುತ್ತಿಲ್ಲ. ಹೊಸದಾಗಿ ಗಿಡ ನೆಡುತ್ತಿದ್ದಾರೆ ಎಂಬ ಗಾಳಿಸುದ್ದಿ ಈ ಪ್ರತಿಭಟನೆಗೆ ಕಾರಣವಾಗಿದೆ. ಇರುವ ಗಿಡಗಳಿಗೆ ತೋಡು ತೋಡಿ ಗೊಬ್ಬರ ಹಾಕುತ್ತೇವೆ ಅಷ್ಟೇ.ನಾಗಭೂಷಣ್ಎಂಪಿಎಂ ಅರಣ್ಯ ವಿಭಾಗದ ರೇಂಜರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net