ಆನೆ ಹಾವಳಿ ಪ್ರದೇಶಕ್ಕೆ ಅರಣ್ಯಾಧಿಕಾರಿಗಳ ಭೇಟಿ

barricad
Published on

ಮಡಿಕೇರಿ:

ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸವಾಳ ಗ್ರಾಮದ ಮಾಜಿ ಸೈನಿಕ ರಾಮನ್ ಮತ್ತು ಲಲಿತಾ ಎಂಬವರ ತೋಟ ಸೇರಿದಂತೆ ಗ್ರಾಮದ ಹಲವು ರೈತರ ಜಮೀನಿಗೆ ದಾಸವಾಳ ಸಮೀಪದ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಪಡಿಸಿದೆ. ಈ ಹಿನ್ನೆಲೆಯಲ್ಲಿ ಈ ಜಮೀನು ಮತ್ತು ಕಾಡಾನೆಗಳು ರೈಲ್ವೆ ಬ್ಯಾರಿಕೇಡ್ ಮುರಿದು ರೈತರ ಜಮೀನಿಗೆ ದಾಳಿ ಮಾಡಿರುವ ಸ್ಥಳಕ್ಕೆ ತಾಲೂಕು ಮಟ್ಟದ ಅರಣ್ಯಾಧಿಕಾರಿ, ಗ್ರಾಮ ಪಂಚಾಯತಿ ಸದಸ್ಯರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸವಾಳ ಗ್ರಾಮದ ಸುತ್ತಮುತ್ತಲು ಕಳೆದ ಒಂದು ತಿಂಗಳಿನಿAದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆ ನಷ್ಟ ಮತ್ತು ಮನೆಯ ಸಮೀಪಕ್ಕೆ ಬಂದು ಮನೆಯ ತಡೆಗೋಡೆಗೆ ಹಾನಿ ಮಾಡಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಸದಸ್ಯ ರಕ್ಷಿತ್ ಮತ್ತು ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯ ಇಲಾಖೆಯ ಎ. ಸಿ.ಎಫ್ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್, ಗ್ರಾ.ಪಂ. ಮಾಜಿ ಸದಸ್ಯ ಸುಮೇಶ್ ಸೇರಿದಂತೆ ಪ್ರಮುಖರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳೆ ಪರಿಹಾರದ ಜತೆಗೆ ಈಗಾಗಲೇ ಕಾಡಾನೆಗಳಿಂದ ಹಾಳಾಗಿರುವ ರೈಲ್ವೆ ಬ್ಯಾರಿಕೇಡ್‌ಗಳನ್ನು ಸರಿಪಡಿಸುವಿಕೆ ಮತ್ತು ಕಾಡಾನೆಗಳು ಅರಣ್ಯದ ಕಡೆಯಿಂದ ಬರುವ ದಾರಿಯಲ್ಲಿ ಸಿ.ಸಿ. ಟಿವಿ ಅಳವಡಿಕೆ ಮಾಡುವಂತೆ, ಇಲಾಖೆಯ ನಿಯಮಾನುಸಾರ ಕ್ರಮಬದ್ಧವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಬಗ್ಗೆ ಸಂಬAಧಿಸಿದ ಸಿಬ್ಬಂದಿ ವರ್ಗಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಸೂಚನೆ ನೀಡಿದರು.

ಮುಂದಿನ ದಿನಗಳಲ್ಲಿ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ದಾಸವಾಳ ಗ್ರಾಮ ವ್ಯಾಪ್ತಿಗೆ ಬರುವ ಕಾಡಾನೆಗಳ ತಡೆಗೆ ರೈಲ್ವೆ ಬ್ಯಾರಿಕೇಡ್ ದುರಸ್ತಿ, ಸೇರಿದಂತೆ ಕಂದಕದ ದುರಸ್ತಿ, ಮತ್ತು ಸೋಲಾರ್ ಅಳವಡಿಕೆಗಳು ಮಳೆಯ ಪ್ರಮಾಣ ಕಡಿಮೆಯಾದ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ಎ.ಸಿ.ಎಫ್ ಗೋಪಾಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net