

ಕುಣಿಗಲ್: ಕಾಳಸಂತೆಯಲ್ಲಿ ರಸಗೊಬ್ಬರ, ಪಶು ಆಸ್ಪತ್ರೆ ಜಾಗದಲ್ಲಿ ಅಕ್ರಮ ಮದ್ಯ ಮಾರಾಟ... ಟ್ಯಾಂಕರ್ ನೀರು ಸರಬರಾಜಿನಲ್ಲಿ ಅವ್ಯವಹಾರ... ಎಚ್‌ವಿಡಿಎಸ್ ಯೋಜನೆ ದುರುಪಯೋಗ ಸೇರಿ ಇನ್ನಿತರ ವಿಷಯಗಳು ಬುಧವಾರ ತಾಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದವು. ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದರೆ, ಖಾಸಗಿ ಅಂಗಡಿಯವರು ದುಪ್ಪಟ್ಟು ದರಕ್ಕೆ ಮಾರುತ್ತಿದ್ದಾರೆ , ಏನು ಕ್ರಮಕೈಗೊಂಡಿದ್ದೀರಾ ಎಂದು ಸದಸ್ಯರು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿಯನ್ನು ತರಾಟೆ ತೆಗೆದುಕೊಂಡರು.
ಸದಸ್ಯರಾದ ಹರೀಶ್‌ನಾಯ್ಕ, ಐ.ಎ.ವಿಶ್ವನಾಥ್, ದಿನೇಶ್, ಗಂಗರಂಗಯ್ಯ ಮಾತನಾಡಿ, ಯೂರಿಯಾಕ್ಕಾಗಿ ರೈತರು ಖಾಸಗಿ ಅಂಗಡಿ ಎದುರು ಸಾಲುಗಟ್ಟಿ ನಿಂತರೂ ಗೊಬ್ಬರ ಸಿಗುತ್ತಿಲ್ಲ, ಮಂಡ್ಯಕ್ಕೆ ಹೋಗಿ ದುಪ್ಪಟ್ಟು ಹಣ ಕೊಟ್ಟು ತರುವಂತಾಗಿದ್ದರೂ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ ಅವರನ್ನು ಪ್ರಶ್ನಿಸಿದರು.
ತಾಲೂಕಿಗೆ 2700 ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆ ಸಲ್ಲಿಸಿದೆವು. ಆದರೆ, 2100 ಮೆಟ್ರಿಕ್‌ಟನ್ ಬಂದಿದೆ, ಕಳೆದ ಬಾರಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಇಟ್ಟಿದರು. ಈ ಬಾರಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿದ್ದು, ಗೊಬ್ಬರದ ಸಮಸ್ಯೆಯಾಗಿದೆ ಎಂದರು. ಇದರಿಂದ ಕೆಂಡಾಮಂಡಲರಾದ ಸದಸ್ಯರು ನಿಮ್ಮ ಇಲಾಖೆ ಇದೆಯೇ ಅಥವಾ ಸತ್ತು ಹೋಗಿದೆಯೇ ಎಂದು ಪ್ರಶ್ನಿಸಿದರು. ಖಾಸಗಿ ಗೊಬ್ಬರದ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳುವಲ್ಲಿ ವಿಫಲಗೊಂಡಿದ್ದೀರಿ, ಇದರಲ್ಲಿ ನಿಮ್ಮ ಪಾತ್ರ ಇರುವ ಸಂಶಯವಿದೆ ಎಂದು ಕೋಪಗೊಂಡರು. ಗುನ್ನಾಗರೆ ಪಶು ಆಸ್ಪತ್ರೆ ಜಾಗದಲ್ಲಿ ವ್ಯಕ್ತಿಯೊಬ್ಬರು ಪೆಟ್ಟಿಗೆ ಅಂಗಡಿಯಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದು, ತೆರವು ಮಾಡಿ ಎಂದು ಸದಸ್ಯ ಹರೀಶ್‌ನಾಯ್ಕ ಆಗ್ರಹಿಸಿದರು. ಪಶು ಇಲಾಖೆ ಜಾಗದಲ್ಲಿ ಮದ್ಯ ಮಾರಾಟ ಮಾಡುತ್ತಿಲ್ಲ, ಹರೀಶ್‌ನಾಯ್ಕ ಆರೋಪ ರಾಜಕೀಯದಿಂದ ಕೂಡಿದೆ ಎಂದು ಸದಸ್ಯ ಗಂಗರಂಗಯ್ಯ ತಿರುಗೇಟು ನೀಡಿದರು.
ಒತ್ತಡ ಕೊಟ್ಟರೆ ಹೇಗೆ?: 600 ಕಿ.ಮೀ.ದೂರದಿಂದ ಬಂದು ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ಆರು ಕಿ.ಮೀ.ದೂರದ ಪಶು ಆಸ್ಪತ್ರೆಗೆ ಅಧಿಕಾರಿಯೊಬ್ಬರನ್ನು ನಿಯೋಜನೆ ಮೇಲೆ ಕಳುಹಿಸಿದರೆ, ಡೆಪ್ಯುಟೇಷನ್ ವಜಾ ಮಾಡಿ ಎಂದು ಬಲಾಢ್ಯ ರಾಜಕಾರಣಿಗಳಿಂದ ಒತ್ತಡ ಹಾಕಿಸುತ್ತಿದ್ದಾರೆ, ಹೀಗಾದರೆ ಕೆಲಸ ಮಾಡಿಸುವುದಾದರೂ ಹೇಗೆ ಎಂದು ಪಶು ಇಲಾಖೆ ಸಹಾಯ ನಿರ್ದೇಶಕ ಡಾ.ಶಶಿಕಾಂತ್ ಬೂದಾಳ್ ಸಭೆ ಮುಂದೆ ನೋವು ಹೇಳಿಕೊಂಡರು. ತಾಪಂ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಎನ್.ವರಲಕ್ಷ್ಮೀ, ಸದಸ್ಯರಾದ ತ್ರಿಪುರ ಸುಂದರಿ, ಕೆಂಪರಾಜುಶ್ರೀ, ಅಲ್ಲಾಬಕಾಶ್, ಕುಮಾರ್, ಕೃಷ್ಣ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ನೀರಿನಲ್ಲೂ ಅವ್ಯವಹಾರ: ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೊರೆಸಲಾಗಿರುವ ಕೊಳವೆ ಬಾವಿ ಹಾಗೂ ಟ್ಯಾಂಕರ್ ನೀರು ಸರಬರಾಜಿನಲ್ಲಿ ಅವ್ಯವಹಾರ ನಡೆದಿದೆ, 300-400 ಅಡಿ ಬೋರ್‌ವೆಲ್ ಕೊರೆಸಿ ಸಾವಿರ ಅಡಿ ಕೊರೆಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗುತ್ತಿದೆ, ಜನರಿಗೆ ಕುಡಿಯುವ ನೀರೇ ಸಿಗುತ್ತಿಲ್ಲ ಎಂದು ಸದಸ್ಯರು ಎಇಇ ಶೈಲಜಾ ಅವರನ್ನು ತರಾಟೆ ತೆಗೆದುಕೊಂಡು, ಅವ್ಯವಹಾರ ತನಿಖೆಗೆ ಒತ್ತಾಯಿಸಿದರು.
ಎಚ್‌ವಿಡಿಎಸ್ ದುರುಪಯೋಗ: ಎಚ್‌ವಿಡಿಎಸ್ ಯೋಜನೆಯನ್ನು ಬೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ದುರುಪಯೋಗ ಪಡಿಸಿಕೊಂಡಿದ್ದಾರೆ. ಸೀನಿಯಾರಿಟಿ ಆಧಾರದ ಮೇಲೆ ಟ್ರಾನ್‌ಸ್ಾರ್ಮರ್ ನೀಡುತ್ತಿಲ್ಲ. ಯಾರು ಹಣ ನೀಡುತ್ತಾರೋ ಅವರಿಗೆ ಟಿಸಿ ನೀಡುತ್ತಾರೆ, ಇದರಿಂದ ಸಾಮಾನ್ಯ ರೈತರಿಗೆ ಅನ್ಯಾಯವಾಗುತ್ತಿದೆ, ಸರಿಪಡಿಸಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಾಪಂ ಅಧ್ಯಕ್ಷೆ ನಾಗಮ್ಮಸೂಚಿದರು.