

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಓಂಕಾರ್ ವಲಯದ ಕಾಡಂಚಿನ ಗ್ರಾಮದಲ್ಲಿ ಆನೆಗಳು ದಾಳಿ ನಡೆಸಿ ಜಮೀನಿನಲ್ಲಿ ನಿರ್ಮಿಸಿದ್ದ ಕೊಟ್ಟಿಗೆಯನ್ನು ಧ್ವಂಸಗೊಳಿಸಿವೆ.
ಬೇಗೂರು ಹೋಬಳಿಯ ದೇಪಗೌಡನ ಹೊಸಪುರ ಗ್ರಾಮದ ಮಾದವೇಗೌಡ ಎಂಬುವರ ಕೊಟ್ಟಿಗೆ ನಾಶವಾಗಿದೆ. ಇವರ ಜಮೀನಿಗೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಜಮೀನಿನಲ್ಲಿ ಹಸುಗಳ ಕಟ್ಟಲು ನಿರ್ಮಿಸಿದ್ದ ಕೊಟ್ಟಿಗೆಯ ಶೀಟುಗಳನ್ನು ಮುರಿದು ಹಾಕಿ ಒಳ ಪ್ರವೇಶಿಸಿವೆ. ಅಲ್ಲಿ ಹಸುಗಳಿಗೆಂದು ಶೇಖರಿಸಿದ್ದ ಮೇವನ್ನು ತಿಂದುಹಾಕಿವೆ.
ಪ್ರತಿ ದಿನವೂ ಈ ಭಾಗದಲ್ಲಿ ಆನೆಗಳ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಆನೆಗಳು ಜನರ ಮೇಲೆಯೇ ದಾಳಿ ನಡೆಸಲು ಮುಂದಾಗುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಕಾವಲಿಗೆ ಹೋಗಲು ಭಯಪಡುತ್ತಿದ್ದಾರೆ. ಆದ್ದರಿಂದ ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಎಚ್ಚೆತ್ತುಕೊಂಡು ಆನೆಗಳ ದಾಳಿಯನ್ನು ತಡೆಗಟ್ಟಲು ಮುದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.