

ತೆಲಸಂಗ: ಅಥಣಿ ತಾಲೂಕಿನ ಒಣ ಬೇಸಾಯ ನೆಚ್ಚಿಕೊಂಡ ರೈತರಿಗೆ ಬರದ ಬವಣೆಯ ಕಾಟ ಒಂದೆಡೆಯಾದರೆ, ಬೆಳೆದ ಬೆಳೆ ಕೈಗೆ ಬಾರದಂತೆ ತಡೆಯುವ ಹವಾಮಾನ ವೈಪರೀತ್ಯ ಮತ್ತೊಂದೆಡೆ. ವಾಣಿಜ್ಯ ಬೆಳೆ ಬೆಳೆದು ಕೈ ಸುಟ್ಟುಕೊಂಡ ರೈತರು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ದ್ವಿದಳ ಧಾನ್ಯವಾದ ತೊಗರಿ ಬೆಳೆಯತ್ತ ಮನಸ್ಸು ಮಾಡಿದ್ದರು. ಆದರೆ, ಈಚೆಗೆ ಸುರಿದ ಭಾರಿ ಮಳೆ, ಹೆಚ್ಚಾಗಿರುವ ಕೀಟಬಾಧೆ, ಹವಾಮಾನ ವೈಪರೀತ್ಯದಿಂದಾಗಿ ರೈತರ ಆಸೆಗೆ ಮತ್ತೆ ತಣ್ಣೀರೆರೆಚಿದಂತಾಗಿದೆ.
ಎದೆ ಎತ್ತರಕ್ಕೆ ಬೆಳೆದಿದ್ದ ತೊಗರಿ: ಪ್ರಸಕ್ತ ವರ್ಷ ಅಥಣಿ ತಾಲೂಕಿನ ಒಂದು ಭಾಗದಲ್ಲಿ ಅತಿಯಾದ ಮಳೆ, ಪ್ರವಾಹ ಕಾಟವಾದರೆ ಮತ್ತೊಂದೆಡೆ ಮಡ್ಡಿ ಭಾಗದಲ್ಲಿ ಮಳೆ ಕೊರತೆ ಕಾಡುತ್ತದೆ. ಅಂಥ ಹಲವು ಸಮಸ್ಯೆಗಳ ಮಧ್ಯೆಯೂ ರೈತರು ಕಡಿಮೆ ಖರ್ಚಿನ ಬೆಳೆ ಬೆಳೆಯುತ್ತ ಬಂದಿದ್ದಾರೆ. ಮಡ್ಡಿ ಭಾಗದಲ್ಲಿ ಹೆಚ್ಚಾಗಿ ತೊಗರಿ ಬೆಳೆಯುತ್ತಾರೆ. ತೊಗರಿಗೆ ಬೆಲೆ ಸಿಗದೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತ ನಷ್ಟ ಅನುಭವಿಸುತ್ತಿದ್ದ. ಪ್ರಸಕ್ತ ವರ್ಷ ಆರಂಭದಲ್ಲಿ ಮಳೆ ಚೆನ್ನಾಗಿ ಸುರಿದಿದ್ದರಿಂದ ತೊಗರಿ ಬೆಳೆ ಎದೆ ಎತ್ತರಕ್ಕೆ ಬೆಳೆದಿತ್ತು. ಆದರೆ, ಕಳೆದ
ತಿಂಗಳು ಸುರಿದ ಭಾರಿ ಮಳೆಗೆ ತಪ್ಪಲು, ಹೂವು ಉದುರಿ ರೋಗಕ್ಕೆ ತುತ್ತಾಗಿದ್ದರಿಂದ ಫಸಲಿನ ನಿರೀಕ್ಷೆಯಲ್ಲಿದ್ದ ರೈತ ಕಣ್ಣೀರು ಹಾಕುವಂತಾಗಿದೆ.
ಸಾವಿರಾರು ಎಕರೆ ಬಿತ್ತನೆ: ಒಟ್ಟು 18,455 ಎಕರೆ ಜಮೀನು ಹೊಂದಿರುವ ತೆಲಸಂಗ ಗ್ರಾಮದ ರೈತರು, 6697 ಎಕರೆ ತೊಗರಿ ಬಿತ್ತನೆ ಮಾಡಿದ್ದಾರೆ. ತೆಲಸಂಗ ಹೋಬಳಿಯೊಂದರಲ್ಲಿಯೇ ಒಣ ಬೇಸಾಯದ ಜಮೀನಿನಲ್ಲಿ 12,322 ಎಕರೆ ತೊಗರಿ ಬಿತ್ತನೆಯಾಗಿದೆ. ಇನ್ನು ಅನಂತಪುರ ಹೋಬಳಿಯಲ್ಲಿ 4522 ಎಕರೆ ತೊಗರಿ ಬಿತ್ತನೆಯಾಗಿದೆ. ಅಥಣಿ ಬಾಗದಲ್ಲಿ 1000 ಎಕರೆ, ಕಾಗವಾಡ ಭಾಗದಲ್ಲಿ 500 ಎಕರೆ ತೊಗರಿ ಬಿತ್ತನೆಯಾಗಿದೆ. ಬೆಳೆಹಾನಿಯಾಗಿದ್ದರಿಂದ ಸಮಸ್ಯೆ ತಲೆದೋರಿದೆ.
ಸರ್ಕಾರ ಕೈ ಹಿಡಿಯಲಿ: ಅಥಣಿ ತಾಲೂಕಿನಲ್ಲಿ ತೊಗರಿ ಬೆಳೆಗಾರರ ಸಂಖ್ಯೆ ಹೆಚ್ಚಿದೆ. ಬರದ ನಾಡು ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ತೆಲಸಂಗ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಡಿಮೆ ಮಳೆಗೆ ಬೆಳೆಯುವ ತೊಗರಿಯನ್ನು ಒಣ ಬೇಸಾಯ ಆಶ್ರಯಿಸಿದ ರೈತರು ಬೆಳೆಯುತ್ತಿದ್ದಾರೆ. ಆದರೆ, ಈ ಬಾರಿ ಕರೊನಾ ಹೊಡೆತ, ವಿಪರೀತ ಮಳೆ, ಹವಾಮಾನ ವೈಪರೀತ್ಯದಿಂದ ಬೆಳೆ ಕೈಕೊಟ್ಟಿದ್ದು, ಸರ್ಕಾರ ಪರಿಹಾರ ಘೋಷಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ನಮ್ಮ ಭಾಗದ ಭೂಮಿ ನೀರಾವರಿ ಕಂಡಿಲ್ಲ. ಒಣ ಬೇಸಾಯ ಮಾಡುತ್ತಿದ್ದೇವೆ. ಆದರೆ, ಹಲವು ವರ್ಷಗಳಿಂದ ಬರ ಬೆನ್ನು ಬಿಡುತ್ತಿಲ್ಲ. ಪ್ರಸಕ್ತ ವರ್ಷ ದುಡಿದು ದುಃಖ ಪಡುವಂತಾಗಿದೆ. ಅಲ್ಪ ಇಳುವರಿ ಬಂದರೂ ಕೂಲಿಕಾರರಿಗೇ ಸಾಕಾಗುವುದಿಲ್ಲ. ಸರ್ಕಾರ ಕೈ ಹಿಡಿಯದಿದ್ದರೆ ನಮ್ಮ ಜೀವನ ಇನ್ನೂ ದುರ್ಭರವಾಗಲಿದೆ.| ರಮೇಶ ಹತ್ತಿ, ತೊಗರಿ ಬೆಳೆದ ರೈತ, ತೆಲಸಂಗಪ್ರಸಕ್ತ ವರ್ಷ ಬಿಟ್ಟುಬಿಡದೆ ಸುರಿದ ಉತ್ತಮ ಮಳೆಗೆ ಬೆಳೆ ಉತ್ತಮವಾಗಿತ್ತು. ಆದರೆ, ಎಲೆ, ಹೂವು ಉದುರಿ ಕಾಯಿ ಬಿಟ್ಟಿಲ್ಲ. ಮೂರು-ನಾಲ್ಕು ವರ್ಷಗಳಿಂದ ತೊಗರಿ ಬಿತ್ತಿದ್ದಕ್ಕೂ ಸಿಡಿರೋಗ ಕಾಣಿಸಿಕೊಂಡು ನಷ್ಟವಾಗಿದೆ. ತೊಗರಿ ನಷ್ಟದ ಬಗ್ಗೆ ಹೊಲಗಳಿಗೆ ಭೇಟಿ ನೀಡಿ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದೇವೆ.| ಯಂಕಪ್ಪ ಉಪ್ಪಾರ, ಕೃಷಿ ಅಧಿಕಾರಿ, ತೆಲಸಂಗ
| ಜಗದೀಶಖೊಬ್ರಿ ತೆಲಸಂಗ