

ಹುಬ್ಬಳ್ಳಿ: ಬದುಕಿನ ಸ್ವಾತಂತ್ರ್ಯ್ಕಾಗಿ ಭೂಮಿ, ವಸತಿ ಮತ್ತು ನಿವೇಶನ ವಂಚಿತ ಬಡವರಿಂದ ಸಾಮೂಹಿಕವಾಗಿ ಬರಿಹೊಟ್ಟೆ ಸತ್ಯಾಗ್ರಹವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಆ. 14 ಹಾಗೂ 15 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಕರಿಯಪ್ಪ ಗುಡಿಮನಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಂದಾಯ, ಅರಣ್ಯ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಿಗಳು, ಹೋರಾಟದ ಪ್ರತಿನಿಧಿಗಳಿರುವಂತೆ ಉನ್ನತ ಮಟ್ಟದ ಸಭೆ ಕರೆಯಬೇಕು. 5 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ, ಅರಣ್ಯ ಭೂಮಿಯಲ್ಲಿರುವ ಯಾವುದೇ ಅರ್ಜಿದಾರರನ್ನು ಒತ್ತುವರಿ ಹೆಸರಿನಲ್ಲಿ ತೆರವುಗೊಳಿಸಬಾರದು. ರೈತರು ಹಾಗೂ ಹೋರಾಟಗಾರರ ಮೇಲೆ ಅರಣ್ಯ ಇಲಾಖೆ, ಪೊಲೀಸರು ದಾಖಲಿಸಿರುವ ಕೇಸ್ಗಳನ್ನು ಹಿಂಪಡೆಯಬೇಕು. ಭೂಮಿ, ನಿವೇಶನ ಮತ್ತು ಮನೆಗಳ ಮಂಜೂರಾತಿಯನ್ನು ಕೈಗೆತ್ತಿಕೊಳ್ಳಬೇಕು ಸೇರಿ ವಿವಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಸರಸ್ವತಿ ಕಟ್ಟಿಮನಿ, ಶಂಕರ ಅಜಮನಿ, ಗಂಗಾಧರ ಪೆರೂರ, ಮೇಘರಾಜ್ ಹಿರೇಮನಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.