

ತುಮಕೂರು : ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಜೀವನವನ್ನೇ ಪಣಕ್ಕಿಟ್ಟು, ಮಹಿಳೆಯರು ಸುಶಿಕ್ಷಿತರಾಗಲು ಕಾರಣರಾದ ಸಾವಿತ್ರಿಬಾಯಿ ುಲೆ ಅವರ ಜನ್ಮದಿನವಾಗಿರುವ ಜ.3ನ್ನು ರಾಷ್ಟ್ರೀಯ ಮಹಿಳಾ ಶಿಕ್ಷಣದ ದಿನವನ್ನಾಗಿ ಘೋಷಿಸುವಂತೆ ನಾಡೋಜ ಬರಗೂರು ರಾಮಚಂದ್ರಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಕನ್ನಡ ಭವನದಲ್ಲಿ ಶ್ರೀ ವಾಲ್ಮೀಕಿ ಸನಿವಾಸ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಭಾನುವಾರ ಆಯೋಜಿಸಿದ್ದ ಗುರುವಂದನೆ, ನುಡಿನಮನ ಹಾಗೂ ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ತರದಲ್ಲಿ ನಡೆದ ಬಹುದೊಡ್ಡ ಪಲ್ಲಟಗಳಲ್ಲಿ ಮಹಿಳಾ ಶಿಕ್ಷಣ ಕೂಡ ಒಂದು. ಹಾಗಾಗಿ, ಇದಕ್ಕೆ ಕಾರಣರಾದ ಸಾವಿತ್ರಿಬಾಯಿ ುಲೆ ಅವರ ಜನ್ಮದಿನವನ್ನು ಮಹಿಳಾ ಶಿಕ್ಷಣ ದಿನವನ್ನಾಗಿ ಘೋಷಿಸುವುದು ಹೆಚ್ಚು ಅರ್ಥಪೂರ್ಣ ಎಂದರು.
ಇಂದು ಶಿಕ್ಷಣ ಪ್ರಯೋಗಗಳಿಗೆ ಬಲಿಪಶುವಾಗುತ್ತಿದೆ, ನಲಿ-ಕಲಿ ಸೇರಿ ಹಲವಾರು ಪ್ರಯೋಗ ಮಾಡುತ್ತಿದ್ದರೂ ಗುಣಾತ್ಮಕ ಶಿಕ್ಷಣ ಸಾಧ್ಯವಾಗಿಲ್ಲ, ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗುತ್ತಿರುವ ಕಾರಣ ಗುರು-ಶಿಷ್ಯರ ನಡುವಿನ ಸಂಬಂಧವೇ ಯಾಂತ್ರಿಕ ಎನಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಶೇ.40 ಆನ್‌ಲೈನ್ ಶಿಕ್ಷಣಕ್ಕೆ ಮೀಸಲಿರಿಸಿದೆ ಎಂದು ಬೇಸರಿಸಿದರು. ಶಿಕ್ಷಣ ತಜ್ಞರ ಜಾಗದಲ್ಲಿ ಶಿಕ್ಷಣೋದ್ಯಮಿಗಳು ಬಂದು ಕುಳಿತಿದ್ದಾರೆ. ಇದರಿಂದಾಗಿ ಶಿಕ್ಷಣದಲ್ಲಿಯೂ ಅಸಮಾನತೆ ಮುಂದುವರಿದಿದೆ. ಕೆಲವರಿಗೆ ಕನ್ನಡ-ಇಂಗ್ಲಿಷ್ ಮಾಧ್ಯಮ, ಸರ್ಕಾರಿ-ಖಾಸಗಿ, ಅಂಗನವಾಡಿ-ಪ್ಲೆ ಹೋಂ ಹೀಗೆ ಕಂದಕ ಹೆಚ್ಚಾಗುತ್ತಿದೆ. ಶಿಕ್ಷಣದ ಮೂಲದಲ್ಲಿಯೇ ಅಸಮಾನತೆ ತಾಂಡವವಾಡುತ್ತಿದೆ ಎಂದರು.
ಶ್ರೀ ವಾಲ್ಮೀಕಿ ಸನಿವಾಸ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಎಸ್.ರಾಘವೇಂದ್ರ ಮಾತನಾಡಿ, 1964ರಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಶಂಕುಸ್ಥಾಪನೆ ಮಾಡಿದ ಶಾಲೆಯಲ್ಲಿ, ವಿದ್ಯಾರ್ಥಿಗಳಿಂದ ಕೇವಲ 1 ರೂ. ಶುಲ್ಕದೊಂದಿಗೆ ಆರಂಭಗೊಂಡ ಈ ಶಾಲೆ, ಇಂದಿನವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದು ಸ್ಮರಿಸಿದರು.
ವಾಲ್ಮೀಕಿ ವಿದ್ಯಾವರ್ಧಕ ಸಂಘದ ಮಾಜಿ ಆಡಳಿತಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಬಡ, ಹಿಂದುಳಿದ, ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶಾಲೆ ಆರಂಭಸಿದ್ದು, 41 ವರ್ಷವಾಗಿದೆ, ಉಚಿತವಾಗಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಈ ಸಂಸ್ಥೆಯ ಹೆಮ್ಮೆ ಎಂದರು.
ನಿವೃತ್ತ ಅಪರ ಜಿಲ್ಲಾಧಿಕಾರಿ ಭಕ್ತರಾಮೇಗೌಡ, ವಿದ್ಯಾರ್ಥಿಗಳ ಸಂಘದ ಖಜಾಂಚಿ ರಾಜೇಂದ್ರ ನಾಯಕ್, ವಿಭಾಗೀಯ ಕಾರ್ಮಿಕ ಅಧಿಕಾರಿ ಮಾಯಗಣ್ಣ, ವಕೀಲ ಡಾ.ಎಸ್.ರಮೇಶ್, ಡಾ.ಕೆ.ಪಿ.ಸುರೇಶ್, ಗೋವಿಂದರಾಜು, ಲೋಕೇಶ್, ರಮೇಶ್, ಎಸ್.ಸಿ.ಧನಲಕ್ಷ್ಮೀ ಮತ್ತಿತರರು ಮಾತನಾಡಿದರು.
ಶ್ರೀ ವಾಲ್ಮೀಕಿ ಸನಿವಾಸ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಗೀತಮ್ಮ, ರಾಜಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕರಾದ ತಿಪ್ಪೇಸ್ವಾಮಿ, ಬಿ.ಎನ್.ವೆಂಕಟೇಶ್, ಡಿ.ಎಂ.ಶಿವಕುಮಾರ್, ಎಂ.ಸಿ.ಲಲಿತ, ಎಲ್.ಬಿ.ಹೇಮಂತಕುಮಾರ್ ಹಾಗೂ ಹಾಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.