

ಶ್ರವಣ್‌ಕುಮಾರ್ ನಾಳ, ಮಂಗಳೂರು
ಯಾಂತ್ರಿಕೃತ ಮೀನುಗಾರಿಕೆ ಮೇ 31ರಂದು ಸ್ಥಗಿತಗೊಂಡ ಬೆನ್ನಿಗೆ ನಾಡದೋಣಿ ಮೀನುಗಾರಿಕೆ ಆರಂಭವಾಗುತ್ತದೆ. ಸದ್ಯ ತೂಾನ್ ಇನ್ನೂ ಬಾರದಿರುವ ಕಾರಣ ಪೂರ್ಣಮಟ್ಟದಲ್ಲಿ ನಾಡದೋಣಿ ಸಂಚಾರ ಆರಂಭಗೊಂಡಿಲ್ಲ. ಮುಂಗಾರು ಅಬ್ಬರಿಸುವ ಸಂದರ್ಭ ಕಡಲಿನಲ್ಲಿ ನಾಡದೋಣಿ ಮೀನುಗಾರಿಕೆ ಮಾಡುವವರು ತುರ್ತಾಗಿ ದಡ ಸೇರಲು ಎನ್‌ಎಂಪಿಎಯಲ್ಲಿ ನಾಡದೋಣಿಗೆ ಶೆಲ್ಟರ್ ನಿರ್ಮಿಸಲು ನಿರ್ಧರಿಸಲಾಗಿದೆ.
ಸದ್ಯ ಬೆರಳೆಣಿಕೆ ನಾಡದೋಣಿಗಳು ಮಂಗಳೂರಿನ ಹಳೆಬಂದರಿನ ಮೂಲಕ ಅಥವಾ ಬೀಚ್ ಸಮೀಪದಿಂದ ಮೀನುಗಾರಿಕೆಗೆ ತೆರಳುತ್ತಾರೆ. ಆದರೆ ಕಡಲು ಪ್ರಕ್ಷುಬ್ದವಾದ ಬಳಿಕ ಎನ್‌ಎಂಪಿಎ ವ್ಯಾಪ್ತಿಗೆ ಬಂದು ಪಾಸ್ ಪಡೆದು ಅಲ್ಲಿಂದಲೇ ಮೀನುಗಾರಿಕೆ ನಡೆಸಬೇಕಾಗುತ್ತದೆ. ಎನ್‌ಎಂಪಿಗೆ ಬರುವ ಮೀನುಗಾರರಿಗೆ ಸದ್ಯ ತಂಗಲು ಸಮುದ್ರ ದಂಡೆ ಮಾತ್ರ ಇದೆ. ಮಳೆ-ಗಾಳಿ ಇರುವಾಗ ಇಲ್ಲಿ ಶೆಲ್ಟರ್ ವ್ಯವಸ್ಥೆ ಇಲ್ಲದೆ ಮೀನುಗಾರರು ಸಮಸ್ಯೆ ಎದುರಿಸುತ್ತಾರೆ. ಈ ಕಾರಣದಿಂದ ಹೊಸದಾಗಿ ಶೆಲ್ಟರ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
*ನಾಡದೋಣಿಯವರಿಗೆ ವಿಶೇಷ ಪಾಸ್ ವ್ಯವಸ್ಥೆ
ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಒಳಭಾಗದಲ್ಲಿ ಕೆ ಕೆ ಗೇಟ್ (ಬೀಚ್ ಸಮೀಪ)ಮುಖೇನ ಕಡಲಿಗಿಳಿಯುವ ನಾಡದೋಣಿಯವರಿಗೆ ವಿಶೇಷ ಪಾಸ್ ವ್ಯವಸ್ಥೆ ಇದೆ. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜೂನ್‌ನಿಂದ ಸಪ್ಟೆಂಬರ್‌ವರೆಗೆ ನಾಡದೋಣಿ ಮೀನುಗಾರಿಕೆ ನಡೆಸುವವರಿಗೆ ಎನ್‌ಎಂಪಿಎ ಭಾಗದಿಂದ ಬೆಳಗ್ಗೆ 6ಕ್ಕೆ ತೆರಳಿ ಸಂಜೆ 6ಕ್ಕೆ ವಾಪಾಸ್ ಬರಲು ಅವಕಾಶವಿದೆ. ಉಳಿದಂತೆ ಕಡಲಿನಲ್ಲಿ ಯಾಂತ್ರಿಕ ಬೋಟ್‌ಗಳಿಗೆ ಅಪಾಯ ಎದುರಾದರೆ ಅಂತಹ ಸಂದರ್ಭ ಬೋಟ್ ನಿಲುಗಡೆಗೆ ಮಾತ್ರ ಎನ್‌ಎಂಪಿಎ ವ್ಯಾಪ್ತಿಯಲ್ಲಿ ಅವಕಾಶವಿದೆ. ನಾಡದೋಣಿ ಮೀನುಗಾರಿಕೆಗೆ ತೆರಳುವವರು ಮಾಹಿತಿಯನ್ನು ಮೀನುಗಾರಿಕಾ ಇಲಾಖೆಗೆ ನೀಡಬೇಕಾಗುತ್ತದೆ. ಇಲಾಖೆಯು ಪರಿಶೀಲಿಸಿ ಅವರಿಗೆ ಐಡಿ ಕಾರ್ಡ್ ನೀಡುತ್ತದೆ. ಅದನ್ನು ಎನ್‌ಎಂಪಿಎ ಅಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟವರಿಗೆ ಪಾಸ್ ನೀಡುತ್ತದೆ. ಇದರ ಉಸ್ತುವಾರಿಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಯವರನ್ನು ಎನ್‌ಎಂಪಿಎಯಲ್ಲಿ ನಿಯೋಜಿಸಲಾಗುತ್ತದೆ. ಸದ್ಯ ಪಾಸ್ ವಿತರಣೆ ಪ್ರಗತಿಯಲ್ಲಿದೆ.
-------------------
2500ಕ್ಕೂ ಅಧಿಕ ಮಂದಿಗೆ ಪಾಸ್ ವಿತರಣೆ
ನಾಡದೋಣಿ ಮೀನುಗಾರಿಕೆ ಸಮುದ್ರದಲ್ಲಿ ಸುಮಾರು 20 ಕಿ.ಮೀ.ನ ಒಳಗಡೆ ಮಾತ್ರ ಅವಕಾಶ. ಆದರೆ ಸಮುದ್ರ ಪ್ರಕ್ಷುಬ್ದವಾಗಿರುವ ಕಾಲಕ್ಕೆ 10 ಕಿ.ಮೀ.ನ ಒಳಗಡೆಯೇ ಮೀನುಗಾರಿಕೆ ನಡೆಯುತ್ತದೆ. ಒಂದು ಹಂತದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡರೆ ಉತ್ತಮ ಮೀನುಗಾರಿಕೆ ನಡೆಸಬಹುದು. ಆದರೆ ಸಾಮಾನ್ಯಕ್ಕಿಂತ ಜಾಸ್ತಿಯಾಗಿ ಸಮುದ್ರ ಅಬ್ಬರಿಸಿದರೆ ನಾಡದೋಣಿಗಳ ಸಂಚಾರಕ್ಕೆ ಅಪಾಯ. ಮಂಗಳೂರಿನ ಬೆಂಗ್ರೆಯಿಂದ ಹೆಜಮಾಡಿವರೆಗೆ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ)ವ್ಯಾಪ್ತಿಯಲ್ಲಿ ರಾಣಿಬಲೆ ಹಾಗೂ ಪಟ್ಟೆ ಬಲೆ ಸಹಿತ ನಾಡದೋಣಿ ಮೀನುಗಾರಿಕೆ ನಡೆಸುವ ಸುಮಾರು 2500ಕ್ಕೂ ಅಧಿಕ ಮಂದಿಗೆ ಪಾಸ್‌ಗಳನ್ನು ನೀಡಲಾಗುತ್ತದೆ.
---------------------
ಎನ್‌ಎಂಪಿಯಲ್ಲಿ ನಾಡದೋಣಿಗೆ ಶೆಲ್ಟರ್!
ಎನ್‌ಎಂಪಿಯಲ್ಲಿರುವ ಬರ್ತ್ ನಂ1 ನಲ್ಲಿ ಖಾಲಿ ಜಾಗವಿದ್ದು, ಇದನ್ನು ಸ್ಪೆಂಡಿಂಗ್ ಬೀಚ್ ಎನ್ನಲಾಗುತ್ತಿದೆ. ಇಲ್ಲಿ ಮುಂದಿನ 3 ತಿಂಗಳ ಒಳಗೆ ಹೊಸ ಶೆಲ್ಟರ್ ನಿರ್ಮಾಣವಾಗಲಿದೆ. ಈ ಮಧ್ಯೆ ತಕ್ಷಣಕ್ಕೆ ಮೀನುಗಾರರ ನೆರವಿಗೆ ಹೊಸದಾಗಿ ತಾತ್ಕಾಲಿಕವಾಗಿ ಶೆಡ್ ಕೂಡ ಈಗ ನಿರ್ಮಾಣ ಮಾಡಲಾಗುತ್ತಿದೆ. ಬಸ್ ನಿಲ್ದಾಣದ ರೂಪದಲ್ಲಿ ತಕ್ಷಣಕ್ಕೆ ಬಳಕೆಗೆ ಸಿಗುವಂತಾಗುವುದು ಇದರ ಉದ್ದೇಶ.
--------------------
ಮೀನುಗಾರರ ಸುರಕ್ಷತೆ ದೃಷ್ಟಿಯಿಂದ ಜೂನ್‌ನಿಂದ ಸಪ್ಟೆಂಬರ್‌ವರೆಗೆ ನಾಡದೋಣಿಗಳ ಆಗಮನ-ನಿರ್ಗಮನಕ್ಕೆ ಎನ್‌ಎಂಪಿಎಯಲ್ಲಿ ಅನುಮತಿ ಇರುತ್ತದೆ. ಇದಕ್ಕಾಗಿ ಪ್ರತ್ಯೇಕ ಪಾಸ್ ವ್ಯವಸ್ಥೆ ಇರುತ್ತದೆ. ಕಡಲು ಇನ್ನೂ ಪ್ರಕ್ಷುಬ್ಧವಾಗಿಲ್ಲದ ಕಾರಣದಿಂದ ನಾಡದೋಣಿ ಸಂಚಾರ ಇನ್ನೂ ಆರಂಭವಾಗಿಲ್ಲ. ಹವಾಮಾನ ಪರಿಶೀಲಿಸಿ, ಎನ್‌ಎಂಪಿಎ ನಿಯಮಾವಳಿಯನ್ನು ಪಾಲಿಸಿಕೊಂಡು ಮೀನುಗಾರಿಕೆ ನಡೆಸಲಾಗುತ್ತದೆ.
ಅಶ್ವಥ್ ಕಾಂಚನ್, ಅಧ್ಯಕ್ಷರು
ಕರಾವಳಿ ನಾಡದೋಣಿ, ಮೀನುಗಾರರ ಸಂಘ, ನವಮಂಗಳೂರು ವಲಯ