ಬರ್ಗಾವತಿ ಕೆರೆ ಒಡಲು ಸೇರುತ್ತಿದೆ ತ್ಯಾಜ್ಯ ನೀರು: ತಡೆಯುವಂತೆ ರೈತ ಸಂಘ ಮನವಿ

8 RMN-MGD p2
Published on

ಮಾಗಡಿ: ಪಟ್ಟಣದ ಶೌಚಗೃಹಗಳ ತ್ಯಾಜ್ಯ ನೀರು ಬರ್ಗಾವತೆ ಕೆರೆ ಸೇರುವುದನ್ನು ತಡೆಯುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಪುರಸಭೆ ಮುಖ್ಯಾಧಿಕಾರಿ ಎಂ.ಎನ್. ಮಹೇಶ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಕೊಳಚೆ ನೀರು ಕೆರೆ ಸೇರಿ ನೀರು ಕಲುಷಿತವಾಗಿ ಸುತ್ತಮುತ್ತಲ ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿನ ನೀರು ಕುಡಿಯುವ ಜನರು ರೋಗದ ಭೀತಿ ಎದುರಿಸುತ್ತಿದ್ದಾರೆ. ಕೆರೆಯ ಸುತ್ತಮುತ್ತಲಿನ ಹೊಲಗಳಲ್ಲಿ ಮೇಯುವ ಹಸು, ಕರು, ಮೇಕೆ, ಕುರಿಗಳಿಗೆ ಕುಡಿಯಲು ಯೋಗ್ಯ ನೀರು ಸಿಗುತ್ತಿಲ್ಲ ಎಂದು ಆರೋಪಿಸಿದರು.

15 ವರ್ಷಗಳ ಹಿಂದೆ ಪಟ್ಟಣದಲ್ಲಿ ಪ್ರಾರಂಭವಾದ ಒಳಚರಂಡಿ ಕಾಮಗಾರಿ ಸಮರ್ಪಕವಾಗಿರದ ಕಾರಣ ಸರ್ಕಾರದ ಕೋಟ್ಯಂತರ ರೂ. ನಷ್ಟವಾಗಿದೆ. ಕಾಮಗಾರಿಗೆ ಚಿಕ್ಕ ಪೈಪುಗಳನ್ನು ಬಳಸಲಾಗಿದೆ. ಅಲ್ಲದೇ ಮ್ಯಾನ್‌ಹೋಲ್‌ಗಳಿಗೆ ಕೋಳಿ ತ್ಯಾಜ್ಯ, ಹೋಟೆಲ್‌ಗಳ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ಮ್ಯಾನ್‌ಹೋಲ್‌ಗಳಲ್ಲಿ ನೀರು ಸರಾಗವಾಗಿ ಹರಿಯದೆ, ತುಂಬಿ ಕೊಳಚೆ ನೀರು ರಸ್ತೆಗೆ ಹರಿದು ಗಬ್ಬುವಾಸನೆ ಬೀರುತ್ತಿದೆ. ಸಾರ್ವಜನಿಕರಿಗೆ ಓಡಾಡಲೂ ಕಿರಿಕಿರಿಯುಂಟಾಗಿದೆ ಎಂದರು.

ಪಟ್ಟಣದಿಂದ ವೆಟ್‌ವೆಲ್ ಮೂಲಕ ಶುದ್ಧೀಕರಣ ಘಟಕಕ್ಕೆ ಹೋಗುವ ಮ್ಯಾನ್‌ಹೋಲ್ ಪೈಪುಗಳನ್ನು ಕೆಲವರು ಒಡೆದು ಈ ನೀರಿನಿಂದ ತರಕಾರಿ ಬೆಳೆಯುತ್ತಿದ್ದಾರೆ. ಇದು ತಿನ್ನಲು ಯೋಗ್ಯವೇ ಎಂದು ಮಹೇಶ್ ಪ್ರಶ್ನಿಸಿದರು.

ಸಂತೆ ಸುಂಕ ಬೇಡ: ಮಾಗಡಿಯಲ್ಲಿ ಶುಕ್ರವಾರ ನಡೆಯುವ ಸಂತೆಯಲ್ಲಿ ಸಾಕಿರುವ ಕೋಳಿ, ಕುರಿಗಳನ್ನು ಮಾರಾಟ ಮಾಡಲು ಬರುವ ರೈತರಿಗೆ ಪುರಸಭೆಯಿಂದ ಸುಂಕ ವಿಧಿಸಬಾರದು, ಈಗಾಗಲೇ ಕರೊನಾದಿಂದಾಗಿ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಮುಂದಾಗಿ. ಇಲ್ಲವೇ ನಾವೇ ದಾನಿಗಳ ನೆರವಿನಿಂದ ಸುಂಕ ಭರಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net