

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದಿಂದ ಗ್ರಾಹಕರಿಗಾಗಿ ರಾಸಾಯನಿಕ ಮುಕ್ತ ಮಂಡ್ಯ ಸಾವಯವ ಬೆಲ್ಲದಿಂದ ಬರ್ಫಿ ಹಾಗೂ ವಿಶೇಷವಾದ ಖೋವಾ ಲಾಡನ್ನು ಸಿದ್ಧಪಡಿಸಿ ಸೋಮವಾರದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸ್ವಾತಂತ್ರೃ ಅಮೃತ ಮಹೋತ್ಸವದ ದಿನದ ಹಿನ್ನೆಲೆಯಲ್ಲಿ ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸಿಹಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಅಂದರೆ ಬೆಲ್ಲದ ಬರ್ಫಿ ಕಾಲು ಕೆಜಿಯ ಬಾಕ್ಸ್ 130 ರೂ ಹಾಗೂ ಖೋವಾ ಲಾಡು ಕಾಲು ಕೆಜಿಯ ಬಾಕ್ಸ್‌ಗೆ 120 ರೂಗೆ ಖರೀದಿ ಮಾಡಬಹುದು.
ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮಾತನಾಡಿ, ಈವರೆಗೆ ಎರಡು ಸಿಹಿ ಉತ್ಪನ್ನಗಳನ್ನು(ಪೇಡಾ, ಬರ್ಫಿ) ಮಾತ್ರ ಉತ್ಪಾದಿಸಲಾಗುತ್ತಿದೆ. ಇದೀಗ ಈ ಪಟ್ಟಿಗೆ ಇನ್ನೆರಡು ಸಿಹಿ ಉತ್ಪನ್ನಗಳು ಸೇರಿಕೊಂಡಿವೆ. ಕಳೆದೆರಡು ತಿಂಗಳಿಂದಲೂ ಬೆಲ್ಲದ ಬರ್ಫಿ ಮತ್ತು ಖೋವಾ ಲಾಡು ಉತ್ಪಾದನೆಯ ಟ್ರಯಲ್ ನಡೆಯುತ್ತಿತ್ತು. ಎಲ್ಲ ಸ್ಯಾಂಪಲ್‌ಗಳನ್ನು ಗಮನಿಸಿ, ಅವುಗಳಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಂಡು ಅಂತಿಮವಾಗಿ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್, ಪ್ರಧಾನ ವ್ಯವಸ್ಥಾಪಕ ಸುಧಾಕರ್, ಡಾ.ಅಕಲಪ್ಪರೆಡ್ಡಿ(ಆಡಳಿತ), ಎಸ್.ಪ್ರಭಾಕರ್(ಶೇಖರಣೆ ಮತ್ತು ತಾಂತ್ರಿಕ), ಪುಷ್ಪಲತಾ(ಹಣಕಾಸು), ಎಸ್.ಎಸ್.ಕಣ್ಣೂರ್(ಡೇರಿ), ಡಾ.ಶ್ಯಾಮಸುಂದರ್(ಖರೀದಿ), ಶಿವಕುಮಾರ್(ಇಂಜಿನಿಯರ್) ಇತರರಿದ್ದರು.