ಕ್ಷೌರಿಕರಿಗೆ 5 ಸಾವಿರ ನೆರವು ತಕ್ಷಣ ತಲುಪಿಸಿ

17 Jaggu 5-Web
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿದರು. ಕೆ.ಎಚ್. ಜಗದೀಶ, ವೆಂಕಟೇಶ ಶಿಂಧಿಹಟ್ಟಿ, ಡಿ.ಜಿ. ನಾಗೇಶ, ತರನ್ನುಮ್ ಇತರರಿದ್ದರು.
Published on

ಬೆಳಗಾವಿ: ಕರೊನಾ ವೈರಸ್ ಹಾವಳಿ, ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಗಸರು ಮತ್ತು ಕ್ಷೌರಿಕರಿಗೆ ಸರ್ಕಾರ ಘೋಷಿಸಿರುವ 5 ಸಾವಿರ ರೂ. ನೆರವನ್ನು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಸೂಚಿಸಿದ್ದಾರೆ.

ಅಗಸರು ಮತ್ತು ಕ್ಷೌರಿಕ ವೃತ್ತಿದಾರರಿಗೆ 5 ಸಾವಿರ ರೂ. ನೆರವು ನೀಡುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ನೆರವು ಪಡೆಯಲು ವೃತ್ತಿ ಲೈಸೆನ್ಸ್ ಕಡ್ಡಾಯವಲ್ಲ. ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಜೂನ್ 30 ಕೊನೆ ದಿನ. ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ವೃತ್ತಿಯ ದೃಢೀಕರಣ ಪತ್ರ ನೀಡಲು ನಿರಾಕರಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆನ್‌ಲೈನ್ ಅರ್ಜಿ: ಸೇವಾಸಿಂಧು ಪೋರ್ಟಲ್‌ನಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕಿರುವುದರಿಂದ ಮುದ್ರಿತ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ವೃತ್ತಿಯ ದೃಢೀಕರಣ ಪ್ರಮಾಣಪತ್ರದ ನಮೂನೆ ಎಲ್ಲರಿಗೂ ಸುಲಭವಾಗಿ ಲಭಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡಬಾರದು. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿ ಪರಿಶೀಲನೆ ನಡೆಸಬೇಕು ಎಂದು ಡಿಸಿ ತಿಳಿಸಿದರು.

ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಮಾತನಾಡಿ, ಜಾತಿ ಬದಲು ವೃತ್ತಿ ಆಧಾರಿತವಾಗಿ ಸರ್ಕಾರ ನೆರವು ನೀಡುತ್ತಿದೆ. ಹಾಗಾಗಿ ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬೇಕು. ಉದ್ಯೋಗ ಪ್ರಮಾಣ ಪತ್ರವನ್ನು ಕಾರ್ಮಿಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಕಂದಾಯ ಅಧಿಕಾರಿ ಅಥವಾ ನಿರೀಕ್ಷಕರು, ಗ್ರಾಪಂ ಕಾರ್ಯದರ್ಶಿಗಳು ನೀಡಲಿದ್ದಾರೆ. ನಂತರ ಅರ್ಜಿದಾರರ ಖಾತೆಗೆ ನೆರವು ಸಂದಾಯವಾಗಲಿದೆ. ಜಿಲ್ಲೆಯಲ್ಲಿ ಇದುವರೆಗೆ 1,226 ಕ್ಷೌರಿಕರು ಮತ್ತು 311 ಅಗಸರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎಂದರು. ಅರ್ಜಿ ಜತೆಗೆ ಕಡ್ಡಾಯವಾಗಿ ಕೆಲವರು ಲೈಸೆನ್ಸ್ ಕೇಳುತ್ತಿರುವುದರಿಂದ ಅರ್ಜಿ ಸಲ್ಲಿಕೆಗೆ ವಿಳಂಬವಾಗುತ್ತಿದೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹಡಪದ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ತರನ್ನುಮ್, ಮಲ್ಲಿಕಾರ್ಜುನ ಜೋಗೂರ ಮತ್ತಿತರರಿದ್ದರು.

ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ

ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ಇರುವವರು ಒಂದು ಬಾರಿ ಐದು ಸಾವಿರ ನೆರವು ಪಡೆಯಬಹುದು. ವೃತ್ತಿ ನಿರ್ವಹಿಸುತ್ತಿರುವ ಕುರಿತು ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದೊಂದಿಗೆ ಛಿಜ್ಞಿಜ್ಠ.ಓಚ್ಟ್ಞಠಿ.ಜಟ.ಜ್ಞಿ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net