

ಆನೇಕಲ್: ತಾಲೂಕಿನ ರಾಜಾಪುರದಲ್ಲಿ ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ.
ರಾಜಾಪುರ ನಿವಾಸಿ ಜಗದೀಶ್(42) ಕೊಲೆಯಾದವ. ಕುಡಿತದ ಚಟಕ್ಕೆ ದಾಸನಾಗಿದ್ದ ಜಗದೀಶ್ ಸದಾ ಸ್ನೇಹಿತರ ಜತೆ ಸೇರಿ ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ನಿದ್ರಿಸುತ್ತಿದ್ದ, ಗುರುವಾರ ರಾತ್ರಿ ಸ್ನೇಹಿತರ ಜತೆ ಸೇರಿ ಮದ್ಯ ಸೇವನೆ ಮಾಡಿದ್ದಾನೆ. ನಶೆ ಏರುತ್ತಿದ್ದಂತೆ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ಹೋಗಿ, ಕೊಲೆ ಮಾಡಲಾಗಿದೆ.
ಜಗದೀಶ್ಗೆ ಪತ್ನಿ ಮತ್ತು ಮಗು ಇದ್ದು, ಕುಡಿತದ ಚಟ ಬಿಡಿಸಲು ನಡೆಸಿದ ಸಾಕಷ್ಟು ಪ್ರಯತ್ನಗಳು ವಿಫಲವಾಗಿದ್ದವು. ಕುಡಿದು ಮನೆಯಲ್ಲಿ ಜಗಳ ಮಾಡುತ್ತಿದ್ದರಿಂದ ಪತ್ನಿ ಗಂಡನ ಮನೆ ಬಿಟ್ಟು ತವರು ಮನೆ ಸೇರಿಕೊಂಡಿದ್ದರು. ಲಾರಿ ಚಾಲಕನಾಗಿದ್ದ ಜಗದೀಶ್ ಇತ್ತೀಚೆಗೆ ಕೆಲಸ ಬಿಟ್ಟಿದ್ದ.ಯಾವಾಗಲೂ ಸ್ನೇಹಿತರ ಜತೆ ಇರುತ್ತಿದ್ದ. ಮನೆಗೆ ಆಗಾಗ ಬಂದು ಹೋಗುತ್ತಿದ್ದ, ಶುಕ್ರವಾರ ಬೆಳಗ್ಗೆ ಸ್ಥಳಿಯರು ಕೊಲೆಯಾಗಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜತೆಯಲ್ಲಿದ್ದ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ನಾಗರಾಜು, ಡಿವೈಎಸ್ಪಿ ಮೋಹನ್, ಜಿಗಣಿ ಠಾಣೆಯ ಸಿ.ಪಿ.ಮಂಜುನಾಥ್ ಸ್ಥಳ ಪರಿಶೀಲಿಸಿ, ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
" ಕುಡಿತದ ಚಟಕ್ಕೆ ಬಿದ್ದು, ಪತ್ನಿ, ಮಗು ಮತ್ತು ಕುಟುಂಬವನ್ನು ದೂರ ಮಾಡಿ ಸ್ನೇಹಿತರ ಜತೆ ಸೇರಿದ್ದ ಜಗದೀಶನನ್ನು ಸ್ನೇಹಿತರೇ ಕೊಲೆ ಮಾಡಿರುವ ಸಾಧ್ಯತೆ ಇದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದೇವೆ."
- ನಾಗರಾಜು, ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ