

ಹುಬ್ಬಳ್ಳಿ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ ಪರಾರಿಯಾದ ಘಟನೆ ಇಲ್ಲಿಯ ನೇಕಾರ ನಗರದ ಬಸವೇಶ್ವರ ಸರ್ಕಲ್ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ಕೊಲೆಯಾದ ಮಹಿಳೆಯನ್ನು ಸುಧಾ (24) ಎಂದು ಗುರುತಿಸಲಾಗಿದೆ.
ಪತಿ ಶಿವಯ್ಯ ಹಿರೇಮಠ (28) ಎಂಬಾತ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೇಟರಿಂಗ್ ಕೆಲಸ ಮಾಡುತ್ತಿದ್ದ ಶಿವಯ್ಯ ಹಾಗೂ ಸುಧಾ ಪರಸ್ಪರ ಪ್ರೀತಿಸಿ ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ ಗಂಡು ಮಗು ಇದೆ. ದಂಪತಿ ಮಧ್ಯೆ ಜಗಳ ಉಂಟಾಗಿ ಅದು ವಿಕೋಪಕ್ಕೆ ತಿರುಗಿ ಶಿವಯ್ಯ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರೊಳಗೆ ಈ ಘಟನೆ ನಡೆದಿದೆ. ಕೊಲೆ ಮಾಡಿ ಬಾಗಿಲು ಹಾಕಿಕೊಂಡು ಪತಿ ಪರಾರಿಯಾಗಿದ್ದಾನೆ. ಬೆಳಗ್ಗೆ ಮಗು ಅಳುವ ಶಬ್ಧ ಕೇಳಿ ಅಕ್ಕಪಕ್ಕದವರು ಮನೆ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಾಯಿಯನ್ನು ಕಳೆದುಕೊಂಡ ಮಗು ಅಳುತ್ತಿದ್ದ ದೃಶ್ಯ ನೋಡುಗರ ಕಣ್ಣುಗಳನ್ನು ತೇವವಾಗಿಸಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಕಸಬಾ ಪೊಲೀಸ್ ಠಾಣೆ ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ ಅವರು ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.