ಬಾಣಂತಿಯರ ಸಾವು ಖಂಡಿಸಿ ಪ್ರತಿಭಟನೆ

BJP123
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ ಮಾತನಾಡಿದರು. ಸೋನಾಲಿ ಸರ್ನೋಬತ್, ನಯನಾ ಬಸ್ಮೆ, ಶಿಲ್ಪಾ ಕೇಕರೆ, ಶಾಂಬವಿ ಅಶ್ವತ್ಥಪುರ, ಉಜ್ವಲಾ ಬಡವನಾಚೆ, ಸುಭಾಷ ಪಾಟೀಲ,ಸಚಿನ ಕಡಿ ಇತರರಿದ್ದರು.
Published on

ಬೆಳಗಾವಿ: ಬಳ್ಳಾರಿ ಸೇರಿ ರಾಜ್ಯದಲ್ಲಿ ನಡೆಯುತ್ತಿರುವ ಬಾಣಂತಿಯರ ಸಾವು ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ರಾಜ್ಯ ಬಿಜೆಪಿ ಮಹಿಳಾ ಘಟಕದ ವತಿಯಿಂದ ಡಿ.16 ರಂದು ಪ್ರತಿಭಟನೆ ನಡೆಸಿ, ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಮಹಿಳೆಯರಿಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ನೀಡಿದ್ದು ಸ್ವಾಗತಾರ್ಹ. ಆದರೆ, ಯೋಜನೆಗೆ ಪೂರಕವಾದ ವ್ಯವಸ್ಥೆ ಮಾಡಬೇಕು. ಸಾರಿಗೆ ಇಲಾಖೆಯ ಬಸ್‌ನಲ್ಲಿ ಸಿಟಿಗಾಗಿ ಹಲವು ಕಡೆ ಗದ್ದಲಗಳಾಗುತ್ತಿವೆ. ಅವಘಡಗಳು ಸಂಭವಿಸುತ್ತಿವೆ. ಕೂಡಲೇ ಸಾರಿಗೆ ಇಲಾಖೆ ಬಸ್‌ಗಳ ಸಂಖ್ಯೆ ಹೆಚ್ಚಿಸಿ, ಮಹಿಳೆಯರಿಗಾಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ವಿಶೇಷವಾಗಿ ಬಾಣಂತಿ ಸಾವಿನ ಬಗ್ಗೆ ಸರ್ಕಾರದ ನಡೆ ಖಂಡಿಸಿ ಸೋಮವಾರ ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಿಂದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಸೋನಾಲಿ ಸರ್ನೋಬತ್, ನಯನಾ ಬಸ್ಮೆ, ಶಿಲ್ಪಾ ಕೇಕರೆ, ಶಾಂಭವಿ ಅಶ್ವತ್ಥಪುರ, ಉಜ್ವಲಾ ಬಡವನಾಚೆ, ಸುಭಾಷ ಪಾಟೀಲ, ಸಚೀನ ಕಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net