

ಇಳಕಲ್ಲ: ಮಹಿಳೆಯೊಬ್ಬರು ಬುಧವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅಧಿಕ ರಕ್ತಸ್ರಾವವಾಗಿ ಮೃತಪಟ್ಟಿರುವುದು ತಾಲೂಕಿನ ಕಂದಗಲ್ಲದಿಂದ ವರದಿಯಾಗಿದೆ.
ಕಂದಗಲ್ಲದ ನಿರ್ಮಲಾ ಮಂಜುನಾಥ ಪೋಲಿಸ್‌ಪಾಟೀಲ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ರಕ್ತಸ್ರಾವಕ್ಕೆ ಒಳಗಾದರು. ಕೂಡಲೇ ಮಹಿಳೆಯನ್ನು ಆಂಬುಲೆನ್ಸ್‌ದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಧಿಕ ರಕ್ತಸ್ರಾವದಿಂದಾಗಿ 12.45ಕ್ಕೆ ಸಾವನ್ನಪ್ಪಿದರು ಎಂದು ವೈದ್ಯ ಅಂಜುಮ್ ಆರಾ ಪೊಲೀಸರಿಗೆ ಕೊಟ್ಟ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿರೇಹೊನ್ನಳ್ಳಿ ಗ್ರಾಮದ ಮೃತಳ ಪತಿ ಮಂಜುನಾಥ ಪೋಲಿಸ್‌ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೆ ನನ್ನ ಪತ್ನಿ ಉಳಿಯುತ್ತಿದ್ದಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಂದಗಲ್ಲದ ಆಸ್ಪತ್ರೆಗೆ ಸರಿಯಾಗಿ ವೈದ್ಯರು ಬರುತ್ತಿಲ್ಲ. ಅಲ್ಲಿನ ನರ್ಸ್‌ಗಳೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ರಕ್ತಸ್ರಾವ ಆದರೆ ಬೇರೆ ಆಸ್ಪತ್ರೆಗಳಿಗೆ ಕಳಿಸುತ್ತಾರೆ. ಇನ್ನು ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕಾಯಾಧ್ಯಕ್ಷ ಗುರು ಗಾಣಿಗೇರ, ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ರಸೂಲ್‌ಸಾಬ್ ತಹಸೀಲ್ದಾರ್, ಬಸನಗೌಡ ಪೈಲ್ ಮತ್ತಿತರರು ಆಗ್ರಹಿಸಿದ್ದಾರೆ.