ಮುಂಡರಗಿಯಲ್ಲಿ ಬಾರಕೋಲು ಚಳವಳಿ

BARAKOLU
Published on

ಮುಂಡರಗಿ: ಬರ ಪರಿಹಾರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ರೈತ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ಬಾರಕೋಲು ಚಳವಳಿ ನಡೆಸಲಾಯಿತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬಾರಕೋಲು, ಎತ್ತು ಚಕ್ಕಡಿಗಳು, ಟ್ರಾ್ಯಕ್ಟರ್​ಗಳ ಸಮೇತ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊಪ್ಪಳ ಸರ್ಕಲ್​ನಲ್ಲಿ ಕೆಲ ಸಮಯ ವಾಹನ ಸಂಚಾರ ತಡೆಯಲಾಯಿತು. ನಂತರ ತಹಸೀಲ್ದಾರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಒಳಾಂಗಣದ ಮುಖ್ಯಗೇಟ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಬೆಳೆ ಪರಿಹಾರವು ತಾಲೂಕಿನ 29ಸಾವಿರ ರೈತರ ಪೈಕಿ 17ಸಾವಿರ ರೈತರಿಗೆ ಮಾತ್ರ ಪರಿಹಾರ ಬಂದಿದೆ. ಇನ್ನೂ 12ಸಾವಿರಕ್ಕೂ ಹೆಚ್ಚು ರೈತರ ಖಾತೆಗೆ ಹಣ ಜಮೆವಾಗಬೇಕು. ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ತಕ್ಷಣ ಎಲ್ಲ ರೈತರಿಗೆ ಪರಿಹಾರ ದೊರೆಯುವಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸಿಂಗಟಾಲೂರುಏತ ನೀರಾವರಿ ಯೋಜನೆಯಡಿ ಪೈಪ್ ಅಥವಾ ಕಾಲುವೆ ಮುಖಾಂತರ ನೀರು ಹರಿಸಬೇಕು. ಡ್ರಿಪ್ ಪೈಪ್ ಹಾಕುವುದನ್ನು ತಕ್ಷಣ ಬಂದ್ ಮಾಡಬೇಕು. ಬೀಜ ರಸಗೊಬ್ಬರ ಸಮರ್ಪಕವಾಗಿ ಸಿಗಬೇಕು. ಜೋಳ ಖರೀದಿ ಕೇಂದ್ರವನ್ನು ಆನ್ಲೈನ್ ಅರ್ಜಿ ಹಾಕಲು ಅವಕಾಶ ಮಾಡಿಕೋಡಬೇಕು. ಬೆಳೆ ಪರಿಹಾರ ಹಾಗೂ ಮಾಶಾಸನ ಇನ್ನಿತರ ಯೋಜನೆ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು. ರೈತರ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಪಡಿಸಬೇಕು. ಪ್ರತಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸವನ್ನು ಕೊಡಬೇಕು. ಪ್ರಧಾನಮಂತ್ರಿ ಜೀವ ವಿಮಾ ಹಣವನ್ನು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಮತ್ತು ಯುದ್ಧ ಮಾಡಿ ಸಾವನ್ನಪ್ಪಿದ ಸೈನಿಕರಿಗೆ ಮೀಸಲಿಡಬೇಕು. ಎ.ಪಿ.ಎಂ.ಸಿ.ಯಲ್ಲಿ ರೈತ ಭವನ ಮತ್ತು ವಸತಿ ಗೃಹ ನಿರ್ವಿುಸಬೇಕು ಇತ್ಯಾದಿ ಬೇಡಿಕೆ ಈಡೇರಿಸುವಂತೆ ರೈತರು ಒತ್ತಾಯಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ಶರಣಪ್ಪ ಕಂಬಳಿ, ಶಂಕರಗೌಡ ಜಯನಗೌಡ್ರ, ಚಂದ್ರಕಾಂತ ಉಳ್ಳಾಗಡ್ಡಿ, ಅಶ್ವಿನಿ ಗೌಡರ, ಎಚ್.ಬಿ. ಕುರಿ ಮೊದಲಾದವರು ಮಾತನಾಡಿದರು. ರೈತರಾದ ರಾಘವೇಂದ್ರ ಕುರಿಯವರ, ಈರಣ್ಣ ಗಡಾದ, ಈರಣ್ಣ ಹಡಪದ, ಹಾಲಪ್ಪ ಅರಹುಣಸಿ, ಚಂದ್ರಪ್ಪ ಬಳ್ಳಾರಿ, ಬೀರಪ್ಪ ಮಲಾರ್ಜಿ, ಕನಕಪ್ಪ ಕುರಿ, ಕಸ್ತೂರೆವ್ವ ಅರಕೇರಿ, ಸುಮಂಗಳಾ ತಳಕಲ್ಲ, ಹನುಮವ್ವ ಸಣ್ಣದೇವಣ್ಣವರ, ಹುಚ್ಚಪ್ಪ ಹಂದ್ರಾಳ, ದುರಗಪ್ಪ ಡೊಣ್ಣಿ, ಉಮೇಶ ಬೆನಕನಾಳ, ಮಂಜುನಾಥ ಚನ್ನಳ್ಳಿ, ಈರಣ್ಣ ಬೆಟಗೇರಿ ಇತರರು ಇದ್ದರು.

ರೈತರೊಂದಿಗೆ ಡಿಸಿ ಚರ್ಚೆ

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ತಹಸೀಲ್ದಾರ್ ಧನಂಜಯ ಎಂ. ಅವರು ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿದರು. ಬರ ಪರಿಹಾರ ವಿತರಣೆ ಬಗ್ಗೆ ಸಚಿವರು, ಅಧಿಕಾರಿಗಳೊಂದಿಗೆ ಮತ್ತೊಮ್ಮೆ ರ್ಚಚಿಸಿ ಕ್ರಮ ವಹಿಸಲಾಗುವುದು. ಬ್ಯಾಂಕ್​ನವರು ಪರಿಹಾರ ಹಣವನ್ನು ರೈತರ ಸಾಲಕ್ಕೆ ತೆಗೆದುಕೊಳ್ಳಬಾರದು ಎಂದು ಈಗಾಗಲೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆ ರೀತಿಯ ಘಟನೆ ನಡೆದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು. ಒಂದು ವಾರದೊಳಗೆ ಎಲ್ಲ ರೈತರಿಗೆ ಪರಿಹಾರ ವಿತರಣೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿ ಪ್ರತಿಭಟನೆ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net