

ಹನೂರು : ತಮಿಳುನಾಡಿನ ಬರಗೂರಿನಲ್ಲಿ ವೈಶಾಖ- ಜೇಷ್ಠ ಮಾಸದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಬೇಡಗಂಪಣ ಲಿಂಗಾಯತ ಭಕ್ತ ಮಂಡಳಿ ವತಿಯಿಂದ 12 ವರ್ಷಕ್ಕೊಮ್ಮೆ ನಡೆಯುವ ದೊಡ್ಡ ಕೊಂಡೋತ್ಸವದ ಸಿದ್ಧತಾ ಕಾರ್ಯಕ್ಕೆ ಸೋಮವಾರ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮುಹೂರ್ತ ಕಂಬ ಪ್ರತಿಷ್ಠಾಪಿಸಲಾಯಿತು. ಕೊಂಡೋತ್ಸವದ ಹಿನ್ನೆಲೆ: ಪವಾಡ ಪುರುಷ ಶ್ರೀ ಮಹದೇಶ್ವರರು 77 ಮಲೆಗಳಲ್ಲಿ ಸಂಚರಿಸುತ್ತಿದ್ದ ವೇಳೆ ದುಷ್ಟ ಶ್ರವಣನು ಅವರ ಅನುಯಾಯಿ ಗಳನ್ನು ಸೆರೆಯಲ್ಲಿಟ್ಟು ಹಿಂಸಿಸುತ್ತಿದ್ದ. ಈ ಬಗ್ಗೆ ಅರಿತು ಮಹದೇಶ್ವರರು ಸ್ಥಳಕ್ಕೆ ಭೇಟಿ ನೀಡಿ ಶ್ರವಣನ ಸಂಹಾರ ಮಾಡಿದರು. ಅನುಯಾಯಿಗಳನ್ನು ಸೆರೆಯಿಂದ ಮುಕ್ತಿಗೊಳಿಸಿದರು. ಬಳಿಕ ಮಹದೇಶ್ವರರು ಅನುಯಾಯಿಗಳೊಂದಿಗೆ ತಮಿಳುನಾಡಿನ ತುರುಸನಪಾಳ್ಯಕ್ಕೆ ತೆರಳಿ ಕುರ್ಚಿನ ಬೀದಿಯಲ್ಲಿ ಸಭೆ ನಡೆಸಿದರು. ಈ ವೇಳೆ ದುಷ್ಟ ಶ್ರವಣನ ಸಂಹಾರದ ಕುರುಹಾಗಿ ಅಗ್ನಿ ಕೊಂಡೋತ್ಸವ ನಡೆಸಲಾಯಿತು. ಬಳಿಕ ಮಹದೇಶ್ವರರು ಹಾಗೂ ಅನುಯಾಯಿಗಳು ಅವರವರ ನೆಲೆಯಲ್ಲಿ ನೆಲೆಗೊಂಡರು. ಇದರ ನೆನಪಿನಾರ್ಥವಾಗಿ ಮ.ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಹಾಗೂ ತಮಿಳುನಾಡಿನ ದ್ರೋಣಗಿರಿ ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ವಿವಿಧ ಪಾಲಿನ ತಂಬಡಿಗಳು ಹಾಗೂ ಭಕ್ತರು ಪ್ರತಿ 12 ವರ್ಷಕ್ಕೊಮ್ಮೆ ದೊಡ್ಡ ಕೊಂಡೋತ್ಸವ ನೆರವೇರಿಸಿಕೊಂಡು ಬರುತ್ತಿರುವುದು ವಾಡಿಕೆ.
ಕೋಂಡೋತ್ಸವದಲ್ಲಿ 9 ದೇವರ ಉತ್ಸವ ಮೂರ್ತಿ ಹಾಗೂ ತಂಬಡಿಗಳು ಭಾಗವಹಿಸಲಿದ್ದಾರೆ. ಜತೆಗೆ ಕಟ್ಟೆಮನೆ ದೊಡ್ಡ ತಟ್ಟಗಾರರು, ಚಿಕ್ಕಪಟಗಾರರು, ಬರಗೂರಿನ 33 ಗ್ರಾಮ, ಮಲೆಮಹದೇಶ್ವರ ಬೆಟ್ಟ ತಪ್ಪಲಿನ 18 ಹಳ್ಳಿ ಭಕ್ತರು ಹಾಗೂ ತಮಿಳುನಾಡಿನ ಹಾಸನೂರು 700 ತಟ್ಟೆಬಾಗಿಲು ತಂಬಡಿಗಳು, ಊರಗೌಡರು, ದಚೆಗಾರರು, ಮಣಿಗಾರರು, ಬೇಡಗಂಪಣರು ಸೇರಿದಂತೆ ಮಲೆಮಹದೇಶ್ವರ ಸ್ವಾಮಿಯ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ.
ಅಗತ್ಯ ಸಿದ್ಧತೆ ಕೈಗೊಳ್ಳುವ ಸಂಬಂಧ ಸೋಮವಾರ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಸುಬ್ರಹ್ಮಣ್ಯ ರಾಜೇಂದ್ರ ಸ್ವಾಮೀಜಿ, ಅಶೋಕ ರಾಜೇಂದ್ರ ಸ್ವಾಮೀಜಿ, ಬರಗೂರಿನ 33 ಹಾಗೂ ಮ.ಬೆಟ್ಟ ತಪ್ಪಲಿನ 18 ಹಳ್ಳಿಯ ಭಕ್ತರು ಸಮ್ಮುಖ ವಿಶೇಷ ಪೂಜೆ ಸಲ್ಲಿಸಿ ಮುಹೂರ್ತ ಕಂಬ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿದರು.