

ಬೆಂಗಳೂರು: ಗಡಿನಾಡಲ್ಲಿ ನೂರೆಂಟು ಸಮಸ್ಯೆಗಳು ಜೀವಂತವಾಗಿದ್ದು, ಭೌಗೋಳಿಕ ವಿವಾದವನ್ನು ಮರಾಠಿಗರು ಭಾವನಾತ್ಮಕ ರೂಪಾಂತರಿಸುತ್ತಿದ್ದಾರೆ. ಇದರ ನಡುವೆ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ ಉಳಿಸಿಕೊಳ್ಳಲು ಸರ್ಕಾರ ಗಮನ ಹರಿಸಬೇಕೆಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕರ್ನಾಟಕ ಸ್ವಾಭಿಮಾನಿ ವೇದಿಕೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಡಿನಾಡಿನಲ್ಲಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು. ಶಿಕ್ಷಣದ ಮೂಲಕ ಕನ್ನಡವನ್ನು ನೆಲೆಯೂರಿಸಬೇಕು. ಗಡಿಯಲ್ಲಿರುವ ಪ್ರದೇಶಗಳನ್ನು ಕೇಂದ್ರೀಕರಿಸಿ, ಪ್ರತ್ಯೇಕ ಶಿಕ್ಷಣ ನಿರ್ದೇಶನಾಲಯವನ್ನು ಸರ್ಕಾರ ಸ್ಥಾಪಿಸಬೇಕು. ಆ ಮೂಲಕ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಪ್ರತ್ಯೇಕ ನಿರ್ದೇಶಕರು, ಸಿಬ್ಬಂದಿ ಇರುವಂತೆ ಗಡಿ ಪ್ರದೇಶಕ್ಕೂ ಪ್ರತ್ಯೇಕ ನಿರ್ದೇಶಕರು ಹಾಗೂ ಸಿಬ್ಬಂದಿ ಒದಗಿಸಬೇಕು ಎಂದ ಬರಗೂರು, ನೇರ, ನಿಷ್ಠುರವಾಗಿ ಮಾತನಾಡುತ್ತಿದ್ದ ಚಂಪಾ (ಚಂದ್ರಶೇಖರ ಪಾಟೀಲ) ಅವರು ಇವತ್ತಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸ್ಥಾಪಿಸುವುದಕ್ಕೆ ಅವರು ಶಕ್ತಿಯಾಗಿದ್ದರು ಎಂದು ಸ್ಮರಿಸಿಕೊಂಡರು. ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಸಮಾಂಭದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಹಿಸಿದ್ದರು.
ಚಂಪಾ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಿದ್ದರು. ಕನ್ನಡ ಪರ ಚಳವಳಿಗಳ ರೂಪುರೇಷೆಗಳನ್ನು ಪರಿಷತ್ತಿನ ಆವರಣದಲ್ಲಿಯೇ ಸಿದ್ಧಪಡಿಸಲಾಗುತ್ತಿತ್ತು. ಪರಿಷತ್ತಿನ ಹಾಲಿ ಅಧ್ಯಕ್ಷರು ಪರಪ್ಪನ ಅಗ್ರಹಾರದ ರೀತಿ ಪರಿಷತ್ತಿನ ಕಟ್ಟಡದ ಕಾಂಪೌಂಡ್ ಎತ್ತರಿಸಿದ್ದಾರೆ. ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದ್ದು, ಅನುಮತಿ ಪಡೆದು ಅಧ್ಯಕ್ಷರ ಭೇಟಿ ಮಾಡಬೇಕಾದ ಪರಿಸ್ಥಿತಿಯಿದೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಟೀಕಿಸಿದರು. ಕಸಾಪದಲ್ಲಿ ನಡೆದಿರುವ ಹಣಕಾಸಿಕ ಅವ್ಯವಹಾರಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.