ಜನ ಜಾನುವಾರುಗಳಿಗೆ ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಿ: ಡಾ.ಎಚ್.ಕೆ.ಪಾಟೀಲ

_MG_0756
Published on

ಗದಗ: ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳಲ್ಲಿ  ಟ್ಯಾಂಕರ್ ಹಾಗೂ ಇತರೇ ಕುಡಿಯುವ ನೀರಿನ ಮೂಲಗಳಿಂದ ಸಮರ್ಪಕ ನೀರು ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಕೆ.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಬರ ಹಾಗೂ ಹಿಂಗಾರು ಹಂಗಾಮಿನ ಪರಿಸ್ಥಿತಿಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಬೇಕು. ಜಾನುವಾರುಗಳಿಗೆ ನೀರು ಹಾಗೂ ಅಗತ್ಯ ಮೇವು ಸಕಾಲಕ್ಕೆ ದೊರೆಯುವಂತೆ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಿತ ಇಲಾಖೆ ಅಧಿಕಾರಿಗಳು ವಹಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸುವಲ್ಲಿ ಅಧಿಕಾರಿಗಳ ನಿಧಾನಗತಿ ಸಹಿಸಲಾಗದು ಎಂದು ಎಚ್ಚರಿಸಿದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯಾಗಿದ್ದು ರೈತರಿಗೆ ಬೆಳೆ ಪರಿಹಾರ ತ್ವರಿತಗತಿಯಲ್ಲಿ ತಲುಪಿಸಲು ಕ್ರಮ ವಹಿಸಬೇಕ. ಜಿಲ್ಲೆಯಲ್ಲಿ 32,218 ಜನ ರೈತರು ಹೆಸರು ಬೆಳೆಗೆ ವಿಮೆ ಹಣ 2.95 ಕೋಟಿ ರೂ. ತುಂಬಿದ್ದಾರೆ. 148 ಕೋಟಿ ರೂ. ವಿಮೆ ಮೊತ್ತವಾಗಿದೆ.  ಹೆಸರು ಬೆಳೆಗೆ ವಿಮಾ ಪರಿಹಾರ ಪ್ರತಿ ಹೆಕ್ಟೇರ್‍ಗೆ 8,250 ರೂ.ನಂತೆ  ಜಿಲ್ಲೆಯ 31,218 ರೈತರಿಗೆ 34.99 ಕೋಟಿ ರೂ. ಪಾವತಿಸಬೇಕಾದ ಮೊತ್ತವಾಗಿತ್ತು ಇದರಲ್ಲಿ  25.48 ಕೋಟಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸಲಾಗಿದ್ದು ಬಾಕಿಯಿದ್ದು ರೈತರ ಖಾತೆಗಳಿಗೆ ಜಮೆ ಆಗಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ಒದಗಿಸಿದರು.  ಗೋವಿನಜೋಳ, ಶೇಂಗಾ, ಹತ್ತಿ, ಈರುಳ್ಳಿ, ಮೆಣಸಿನಕಾಯಿ  ಈ ಬೆಳೆಗಳಿಗೆ ಪಾವತಿಸಿದ ವಿಮಾ ಕಂತಿಗೆ ಮಧ್ಯಂತರ ಪರಿಹಾರವಾಗಿ ಜಿಲ್ಲೆಗೆ 90 ಕೋಟಿ ಬರಬೇಕಿದೆ ಎಂದರು.    

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ಮುಂಗಾರು ಹಂಗಾಮಿನಲ್ಲಿ 309810 ಹೆಕ್ಟೇರ್ ಪ್ರದೇಶ ಕೃಷಿ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು ಆ ಪೈಕಿ 201275 ಹೆ. ಬಿತ್ತನೆಯಾಗಿದೆ. 78996 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಬಿತ್ತನೆಗೆ  ಗುರಿ ಹೊಂದಿದ್ದು  ಆ ಪೈಕಿ 72569 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬಿತ್ತನೆಯಾಗಿದೆ.

ಮುಂಗಾರು ಹಂಗಾಮಿನಲ್ಲಿ  ಬರಗಾಲದಿಂದ  187850 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಹಾನಿಯಾಗಿದ್ದು,   66007 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಕೃಷಿ ಬೆಳೆಯ ಹಾನಿ ಪ್ರಮಾಣ  19745 ಲಕ್ಷ ರೂ ಹಾಗೂ ತೋಟಗಾರಿಕೆ ಬೆಳೆ ಹಾನಿ ಪ್ರಮಾಣ  6114.66 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪರಿಹಾರ ಧನವನ್ನು ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ವಯ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.    

ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮಾಹಿತಿ ಒದಗಿಸುತ್ತಾ ಜಿಲ್ಲೆಯ 42 ಗ್ರಾಮಗಳಲ್ಲಿ  ಮುಂದಿನ ದಿನಮಾನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳೆಂದು ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಪ್ರಸ್ತುತ ಡಿ.ಬಿ.ಓಟಿ. ಯೋಜನೆಯಿಂದ ಕುಡಿಯುವ ನೀರು ಒದಗಿಸಲಾಗುತ್ತಿದ್ದು ಇಲ್ಲಿಯವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಸಮಸ್ಯೆ ಎದುರಾದಲ್ಲಿ  ಹೊಸ ಬೋರವೆಲ್  ಹಾಗೂ  ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲು ಕ್ರಮ ವಹಿಸಲಾಗುವುದು.
ನಗರ ಸ್ಥಳೀಯಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ವಾರ್ಡುಗಳನ್ನು ಗುರುತಿಸಲಾಗಿದ್ದು  9  ಸ್ಥಳೀಯ ಸಂಸ್ಥೆಗಳಲ್ಲಿ  50  ವಾರ್ಡುಗಳನ್ನು ಗುರುತಿಸಲಾಗಿದೆ.  ಜಾನುವಾರುಗಳಿಗೆ ಅಗತ್ಯವಿರುವ ಮೇವು ಪೂರೈಸಲು ಸಚಿವರ ಸೂಚನೆಯಂತೆ ಪ್ರತಿ ಗ್ರಾಮ ಪಂಚಾಯತ್‍ವಾರು ಮೇವು ಬ್ಯಾಂಕ್ ತೆರೆಯಲು ಕ್ರಮ ವಹಿಸಲಾಗುತ್ತಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ಆಹಾರ ಇಲಾಖೆಯ ಉಪನಿರ್ದೇಶಕ ಗಂಗಪ್ಪ, ಪಿ.ಆರ್.ಇ.ಡಿ. ಕಾರ್ಯಪಾಲಕ ಅಭಿಯಂತರ ಶಿವಾನಂದ ಗೌಡರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಹುಲಗಣ್ಣವರ ಸೇರಿದಂತೆ ತಾ.ಪಂ. ಆಡಳಿತಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಆಯಾ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net