ಮಳೆಯ ಲಕ್ಷಣಗಳಿಲ್ಲ, ಒಣಗುತ್ತಿದೆ ಬೆಳೆಗಳು

21mdk05
Published on

ಮಡಿಕೇರಿ:
ದೇಶಕ್ಕೆ ಜೀವನದಿ ಕಾವೇರಿಯನ್ನು ಕೊಟ್ಟಿರುವ ಕೊಡಗಿನಲ್ಲಿ ಸದ್ಯಕ್ಕೆ ಮಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಬಿಸಿಲಿನ ತಾಪಕ್ಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಫಸಲು ಮಾತ್ರವಲ್ಲದೆ ಗಿಡವೇ ಒಣಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ವರ್ಷ ಕೊಡಗಿನ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟುಹೋಗುವ ಆತಂಕ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಆಗ್ರಹ ಕೇಳಿಬರುತ್ತಿದೆ.

ಒಂದೆಡೆ ಚುನಾವಣೆಯ ಕಾವು ಏರುತ್ತಿದ್ದರೆ, ಮತ್ತೊಂದು ಕಡೆ ಸೂರ್ಯನ ಪ್ರಖರತೆಯೂ ನೆತ್ತಿ ಸುಡುವಂತಿದ್ದು ಮಳೆರಾಯನ ಕೃಪೆಗಾಗಿ ಆಕಾಶ ನೋಡುವ ಸ್ಥಿತಿ ಎದುರಾಗಿದೆ. ರಾಜ್ಯದ ಜೀವನಾಡಿಯಾಗಿ ಹಸಿರನ್ನು ಉಡಿಸುವ ಕಾವೇರಿಯ ತವರಿನಲ್ಲಿ ವರುಣ ಮುನಿಸಿಕೊಂಡಂತಿದ್ದು, ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಯನ್ನು ಉಳಿಸಿಕೊಳ್ಳಲು ಬೆಳೆಗಾರ ಪರದಾಡುವಂತಾಗಿದೆ. ಜಿಲ್ಲೆಯಲ್ಲೇ ಹೆಚ್ಚು ಮಳೆ ಬೀಳುವ ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ ಮತ್ತಿತರ ಭಾಗಗಳಲ್ಲೂ ವಾಡಿಕೆಯ ಮಳೆ ಆಗಿಲ್ಲ. ಈ ಪ್ರದೇಶದಲ್ಲಿ ಕೆಲವೊಮ್ಮೆ ಮೋಡ ಕಟ್ಟಿ ಮಳೆಯ ನಿರೀಕ್ಷೆ ಮೂಡಿಸಿದರೂ ಸಂಜೆಯಾಗುತ್ತಿದ್ದಂತೆಯೇ ಕರಗಿ ನಿರಾಸೆಗೆ ಕಾರಣವಾಗುತ್ತಿದೆ.

ಮಳೆಯಾಗದ ಕಾರಣಕ್ಕೆ ಕಾವೇರಿ, ಲಕ್ಷ್ಮಣ ತೀರ್ಥ ಸೇರಿದಂತೆ ಜಿಲ್ಲೆಯ ಬಹುತೇಕ ದೊಡ್ಡ, ಚಿಕ್ಕ ನದಿಗಳು ಹಲವು ಕಡೆಗಳಲ್ಲಿ ಬತ್ತಿಹೋಗಿದೆ. ಕೆಲವು ಪ್ರದೇಶಗಳಲ್ಲಿ ಬಯಲು ಪ್ರದೇಶದ ನದಿಗಳಂತೆ ಹರಿವು ನಿಲ್ಲಿಸಿದ್ದು, ಬಂಡೆ, ಮರಳಿನ ರಾಶಿ ಮಾತ್ರ ಗೋಚರವಾಗುತ್ತಿದೆ. ಇದಕ್ಕೆ ಮಳೆಯ ಕೊರತೆ ಮಾತ್ರ ಕಾರಣವಲ್ಲದೆ ಸುಡುವ ಬಿಸಿಲು ಕೂಡ ಕೆಟ್ಟ ಪರಿಣಾಮ ಬೀರುತ್ತಿದೆ. ಕಳೆದ ೩೦ ವರ್ಷಗಳಲ್ಲೇ ದಾಖಲೆಯ ಅತ್ಯಂತ ಹೆಚ್ಚಿನ ತಾಪ ೩೬.೧ ಡಿಗ್ರಿ ಸೆಲ್ಸಿಯಸ್ ಏ.೧೪ಕ್ಕೆ ಜಿಲ್ಲೆಯಲ್ಲಿ ದಾಖಲಾಗಿದೆ. ಕುಶಾಲನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ೩೭ ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ಕಂಡು ಬಂದಿದೆ. ಇದರಿಂದಾಗಿ ನದಿಯಲ್ಲಿ ಮಾತ್ರ ನೀರು ಇಂಗುವುದಲ್ಲದೆ ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿಯುತ್ತಿದೆ.

ಬಿಸಿಲಿನ ಧಗೆ ಹೆಚ್ಚಳ ಮತ್ತು ಮಳೆ ಕೊರತೆಯ ನೇರ ಪರಿಣಾಮ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಮೇಲೆ ತಟ್ಟಿದೆ. ಸಕಾಲದಲ್ಲಿ ಒಂದು ಉತ್ತಮ ಮಳೆ ಸಿಕ್ಕಿದವರು, ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡು ತೋಟದಲ್ಲಿ ಕಾಫಿ ಹೂವು ಅರಳಿಸಿದ್ದವರೆಲ್ಲಾ ಈಗ ಮತ್ತೊಂದು ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ. ’ಈಗ ’ಬ್ಯಾಕಿಂಗ್’ ಸಿಕ್ಕಿದರೆ ಮಾತ್ರ ಫಸಲು ಉಳಿಯುತ್ತದೆ. ಇಲ್ಲದಿದ್ದರೆ ಮುಂದಿನ ವರ್ಷ ಕಾಫಿ ತೋಟಕ್ಕೆ ಕೊಯ್ಲು ಕೆಲಸಕ್ಕೆ ಹೋಗುವ ಅಗತ್ಯವೇ ಇಲ್ಲ, ಎನ್ನುತ್ತಿದ್ದಾರೆ ಬೆಳೆಗಾರರು. ನದಿ, ತೊರೆ, ಕೊಳವೆಬಾವಿಗಳಿಂದ ನೀರಾವರಿ ವ್ಯವಸ್ಥೆ ಮಾಡಿಕೊಳ್ಳೋಣ ಎಂದರೆ ಈಗ ಅಲ್ಲಿಯೂ ನೀರು ಬತ್ತಿದೆ.
ಮಳೆಯನ್ನೇ ನಂಬಿದವರು ಫಸಲು ಉಳಿಸಿಕೊಳ್ಳುವುದಿರಲಿ ಮಕ್ಕಳಂತೆ ಸಲುಹಿಕೊಂಡು ಬಂದಿರುವ ಕಾಫಿ ಗಿಡಗಳನ್ನೇ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಜಿಲ್ಲೆಯಲ್ಲೇ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿರುವ ಮಡಿಕೇರಿ ತಾಲೂಕಿನ ಚೇಲಾವರ ಭಾಗದಲ್ಲಿಯೇ ಕಾಫಿ ಗಿಡಗಳು ಒಣಗಿ ನಿಂತಿದೆ. ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತಿತರ ಭಾಗಗಳಲ್ಲೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲೂ ಕಾಫಿ ಗಿಡಗಳು ಬಾಡುತ್ತಿದ್ದು, ಸದ್ಯದಲ್ಲಿ ಮಳೆ ಬಾರದಿದ್ದರೆ ಇವು ಕೂಡ ಒಣಗುವುದು ಖಚಿತ ಎನ್ನುತ್ತಾರೆ ಬೆಳೆಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net