

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದ ಬಾರ್ ನಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಮಾಡಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗೇಪಲ್ಲಿ ಪಟ್ಟಣದ 3ನೇ ವಾರ್ಡಿನ ನಿವಾಸಿ ಸೀನಪ್ಪ ಅಲಿಯಾಸ್ ಶ್ರೀನಿವಾಸ್ (48 ವರ್ಷ) ಕೊಲೆಗೀಡಾಗಿರುವ ದುರ್ದೈವಿ.
ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿಯ ಚಿತ್ರಾವತಿ ಜಲಾಶಯಕ್ಕೆ ಹೋಗುವ ರಸ್ತೆಯಲ್ಲಿ ಹತ್ಯೆಗೆ ಗುರಿಯಾಗಿದ್ದಾನೆ. ಮೃತ ವ್ಯಕ್ತಿ ಬಾಗೇಪಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಪ್ರೀತಿ ಬಾರ್ ನಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದು, ಗುರುವಾರ ರಾತ್ರಿಯೂ ಸಹ ಬಾರ್ ನಲ್ಲಿ ಕೆಲಸಮಾಡಿ ಮನೆಗೆ ಹೋಗುವುದಾಗಿ ಬಾರ್ ವ್ಯವಸ್ಥಾಪಕ ತಿಳಿಸಿದ್ದಾರೆ. ರಾತ್ರಿ ಬಾರ್ ಕೆಲಸ ಮುಗಿಸಿಕೊಂಡು ಮನೆ ಹೋಗಿರುವ ಶ್ರೀನಿವಾಸ್ ಶುಕ್ರವಾರ ಬೆಳಿಗ್ಗೆ ಚಿತ್ರಾವತಿ ಜಲಾಶಯದ ಸಮೀಪ ರಕ್ತದ ಮಡವಿನಲ್ಲಿ ಶವವಾಗಿ ಕಾಣಿಕೊಂಡಿದ್ದಾರೆ.
ಶ್ರೀನಿವಾಸ್ ಕೆಲಸ ಮಾಡುತ್ತಿದ್ದ ಬಾರ್ ನಲ್ಲಿ ಸ್ನೇಹಿತರಿಗೆ ಮದ್ಯವನ್ನು ಸಾಲವಾಗಿ ನೀಡಿದ್ದು, ಶ್ರೀನಿವಾಸ್ ಹಾಗೂ ಸ್ನೇಹಿತರ ನಡುವೆ ಎಣ್ಣೆಯ ಸಾಲದ ಹಣಕ್ಕಾಗಿ ಗಲಾಟೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ಪ್ರಾರಂಭಿಸಿದ್ದಾರೆ.
ಕೃತ್ಯ ನಡೆದಿರುವ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ವಿಶೇಷ ತನಿಖಾ ತಂಡದ ಆಗಮಿಸಿ ಮಾಹಿತಿಯನ್ನು ಸಂಗ್ರಹಿಸಿದೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಖಾಸಿಂ ಖಾನ್, ಬಾಗೇಪಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರಶಾಂತ್ ವರ್ಣಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಾಗೇಪಲ್ಲಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.