

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಉನ್ನತಿಕೃತ ಶಾಲೆ ಬಳಿ ಬಾರ್ ತೆರೆದಿದ್ದು, ಇದರಿಂದ ವಿದ್ಯಾರ್ಥಿಗಳ ಓಡಾಟಕ್ಕೆ ಹಾಗೂ ಕಲಿಕೆಗೆ ತೊಂದರೆಯಾಗಿದೆ.
ನೂರು ವರ್ಷ ಇತಿಹಾಸವಿರುವ ಸರ್ಕಾರಿ ಉನ್ನತಿಕೃತ ಆಂಗ್ಲ ಮಾಧ್ಯಮ ಶಾಲೆಯಲ್ಲಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ದಾನಿಗಳ ಸಹಕಾರದಿಂದ ಖಾಸಗಿ ಶಾಲೆಗೂ ಕಮ್ಮಿಯಾಗದಂತೆ ಪಾಠ&ಪ್ರವಚನದ ಜತೆಗೆ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಈ ಶಾಲೆ ಸಮೀಪವೇ ಬಾರ್ ತೆರೆದಿದ್ದು, ವಿದ್ಯಾರ್ಥಿಗಳು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ.
ರಾಜಕೀಯ ಪ್ರಾಬಲ್ಯದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಟ್ಟಡದಲ್ಲಿ ಮುಖಂಡರೊಬ್ಬರು ಬಾರ್ ತೆರೆದಿರುವುದೇ ಅವಾಂತರಕ್ಕೆ ಕಾರಣವಾಗಿದೆ. ಶಾಲಾ ಆವರಣದ ನೂರು ಮೀಟರ್ ಸುತ್ತ ಧೂಮಪಾನ, ಮದ್ಯಮಾರಾಟ ಹಾಗೂ ಇನ್ನಿತರ ಚಟುವಟಿಕೆ ನಿಷೇಧಿಸಲಾಗಿದೆ. ಆದರೂ, ಸರ್ಕಾರಿ ನಿಯಮ ಉಲ್ಲಂಘಿಸಿ ಸ್ಥಳಿಯ ಅಬಕಾರಿ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ನೀಡುವ ಮೂಲಕ ಬಾರ್ ನಡೆಸಲಾಗುತ್ತಿದೆ.
ಇನ್ನು ಈ ಬಾರ್ ಇರುವ ಮಾರ್ಗದಿಂದ ಪ್ರತಿನಿತ್ಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಹಿಳೆಯರು ಸಂಚರಿಸುವ ರಸ್ತೆ ಇದಾಗಿದ್ದು, ಮದ್ಯ ವ್ಯಸನಿಗಳ ಭಯದಲ್ಲಿ ಬೇರೊಂದು ರಸ್ತೆಯಿಂದ ಸಂಚಾರ ಮಾಡಬೇಕಾದ ಸ್ಥಿತಿ ನಿಮಾರ್ಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆಲ ವ್ಯಾಪಾರ ವಹಿವಾಟುಗಳಿಗೆ ವಿದ್ಯಾರ್ಥಿಗಳು ದಾರಿಯಲ್ಲಿ ತಲೆ ತಗ್ಗಿಸಿಕೊಂಡು ಹೋಗಿಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ಯ ಕುಡಿಯುವವರು ದಾರಿಯಲ್ಲೇ ಗಲೀಜು ಮಾಡಿ ಸ್ವಚ್ಛತೆ ಹಾಗೂ ನೈರ್ಮಲ್ಯ ನಾಶ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು.
| ರಾಧಮ್ಮ ಗುಮ್ಮಿರೆಡ್ಡಿಪುರ, ನಿವಾಸಿ
ಕಣ್ಣುಮುಚ್ಚಿ ಕುಳಿತ ಅಬಕಾರಿ ಇಲಾಖೆ:
ಬಾರ್ ಸ್ಥಳಾಂತರ ಮಾಡುವಂತೆ ಸುಮಾರು 2 ವರ್ಷಗಳ ಹಿಂದೆಯೇ ಸಾರ್ವಜನಿಕರು ಸಂಬಂಧಪಟ್ಟ ಸಚಿವರು ಹಾಗೂ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿದರೂ, ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳದಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಶಾಲೆ ಇರುವ ನೂರು ಮೀಟರ್ ದೂರದಲ್ಲಿ ಧೂಮಪಾನ, ಮದ್ಯ ಮಾರಾಟ ಸಂಬಂಧಿಸಿದ ಅಂಗಡಿಗಳು ಇರಬಾರದೆಂದು ಸರ್ಕಾರದ ಆದೇಶವಿದೆ. ಆದರೂ ಆದೇಶವನ್ನು ಗಾಳಿಗೆ ತೂರಿ ಶಾಲೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಬಾರ್ ತೆರೆದಿರುವುದು ಖಂಡನೀಯ. ಸಂಬಂಧಪಟ್ಟ ಅಧಿಕಾರಿ ಈ ವಿಚಾರವಾಗಿ ತಕ್ಷಣ ಕ್ರಮಕೈಗೊಳ್ಳಬೇಕು.
| ಪಾತಕೋಟೆ ನವೀನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ್ ಪ್ರಾಂತ ರೈತ ಸಂಘ