

ಬೆಂಗಳೂರು: ಕೋಟಾದಡಿ ಬಾಕಿ ಉಳಿದಿರುವ ಸನ್ನದುಗಳನ್ನು ಹರಾಜು ಹಾಕಲು ಮುಂದಾಗಿರುವ ಅಬಕಾರಿ ಇಲಾಖೆಯ ಕ್ರಮಕ್ಕೆ ಕೆಲ ಬಾರ್ ಮಾಲೀಕರಿಂದ ವಿರೋಧ ವ್ಯಕ್ತವಾಗುತ್ತಿದೆ.
1987ರಲ್ಲಿ ನಿಗದಿಯಾಗಿದ್ದ ವೈನ್‌ಶಾಪ್(ಸಿಎಲ್2) ಕೋಟಾದಡಿ ಬಾಕಿ ಉಳಿದಿದ್ದ ಸನ್ನದು ಮಂಜೂರಾತಿಗೆ ಸಂಬಂಧಪಟ್ಟಂತೆ 71 ಮಂದಿ ಈಗಾಗಲೇ ಶುಲ್ಕ ಪಾವತಿಸಿ, ಇಲಾಖೆ ಅರ್ಜಿ ಸಲ್ಲಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ಕಡತ ಸರ್ಕಾರ ಮಟ್ಟದಲ್ಲೇ ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಲೈಸೆನ್ ಮಂಜೂರಾತಿ ಕೋರಿ ಇಲಾಖೆ ಮತ್ತು ಸರ್ಕಾರಕ್ಕೆ 10ಕ್ಕೂ ಅಧಿಕ ಬಾರಿ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಸರ್ಕಾರ ಅಥವಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಿರುವಾಗ, ಕಡತವನ್ನು ವಿಲೇ ಮಾಡದೆ ಏಕಾಏಕಿ ಹರಾಜು ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ.
1992ರಿಂದ ಹೊಸದಾಗಿ ಸಿಎಲ್2 ಮತ್ತು ಸಿಎಲ್9 ಲೈಸೆನ್ಸ್ ನೀಡಲಾಗುತ್ತಿಲ್ಲ ಎಂದು ಇಲಾಖೆ ಹಲವು ಬಾರಿ ಹೇಳಿದೆ. ಆದರೂ, ಯಾವ ಆಧಾರದಲ್ಲಿ ಇಲಾಖೆ ಅಧಿಕಾರಿಗಳು ಸನ್ನದು ಹರಾಜು ಮಾಡುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಅಸ್ತಿತ್ವದಲ್ಲಿ ಇರದ ಸನ್ನದುಗಳನ್ನು ಹರಾಜು ಹಾಕಿ ಆದಾಯ ಸಂಗ್ರಹ ಮಾಡುವ ಕಾನೂನುಬಾಹಿರ ಕೆಲಸಕ್ಕೆ ಇಲಾಖೆ ಕೈಹಾಕಿದೆ. ಗ್ಲೋಬಲ್ ಬಿಡ್ಡಿಂಗ್ ಸಿಸ್ಟಂ ಮೂಲಕ ವಿಶ್ವದ ಯಾವುದೇ ಮೂಲೆಯಿಂದ ಬೆಡ್ಡಿಂಗ್‌ನಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಿರುವುದು ಬಲಾಢ್ಯರಿಗೆ ಅನುಕೂಲವಾಗಲಿದೆ. ದೈತ್ಯ ಕಂಪನಿಗಳು ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಲೈಸೆನ್ಸ್ ಖರೀದಿ ಮಾಡಿದ್ದರೂ ಮುಂದೆ ಸ್ಪರ್ಧೆಗೆ ಇಳಿದು ಎಂಆರ್‌ಪಿ ದರಗಿಂತ ಕಡಿಮೆ ದರಕ್ಕೆ ಮದ್ಯ ಮಾರಾಟ ಮಾಡಲಿದ್ದಾರೆ. ಇದರಿಂದ ಸ್ಥಳೀಯ ಬಾರ್ ಮಾಲೀಕರಿಗೆ ಸಮಸ್ಯೆ ಉಂಟಾಗಲಿದೆ. ಬೇರೆ ರಾಜ್ಯದವರು ಭಾಗವಹಿಸುವಿಕೆಯಿಂದ ಸ್ಥಳೀಯರಿಗೆ ಅನ್ಯಾಯವಾಗಲಿದೆ ಎನ್ನುತ್ತಾರೆ ಬಾರ್ ಮಾಲೀಕರು.
ಸಿಎಲ್2 ಕೋಟಾದಡಿ ನಿಗದಿಕ್ಕಿಂತ ಹೆಚ್ಚುವರಿಯಾಗಿ ಮಂಜೂರು ಆಗಿದ್ದ 385 ವೈನ್‌ಶಾಪ್ ರದ್ದುಪಡಿಸುವಂತೆ ಹೈಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಇಲಾಖೆ ಉಲ್ಲಂಸಿದೆ. ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್2 ಶಾಪ್‌ಗಳನ್ನು 1987ರಲ್ಲಿ ನಿಗದಿಪಡಿಸಿ 1994ರಲ್ಲಿ ಆಗಿನ ಸರ್ಕಾರ ರದ್ದುಪಡಿಸಿತ್ತು. 1999ರಲ್ಲಿ ನಡೆದ ಪ್ರಕರಣದಲ್ಲಿ ಹೈಕೋರ್ಟ್ ಕೂಡ ಹೆಚ್ಚುವರಿ ಮಂಜೂರು ಆಗಿದ್ದ ಸಿಎಲ್2 ವೈನ್‌ಶಾಪ್ ರದ್ದುಪಡಿಸುವಂತೆ ಆದೇಶಿಸಿತ್ತು.2018ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿದ್ದರೂ ಇಲಾಖೆ ಆದೇಶ ಪಾಲಿಸಿಲ್ಲ. ಈ ಅಂಶವನ್ನು ಅಧಿಕಾರಿಗಳು ಬೇಕಾಂತಲ್ಲೇ ಮರೆಮಾಚಿದ್ದಾರೆ ಎಂದು ಬಾರ್ ಮಾಲೀಕ ಸಾಮ್ರಾಟ್ ಪೂಜಾರಿ ದೂರಿದರು.
7 ವರ್ಷದ ಹಿಂದೆ ಸನ್ನದು ಶುಲ್ಕ ಪಾವತಿಸಿ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇನೆ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಹೀಗಿರುವಾಗ, ಇಲಾಖೆಯಿಂದ ಹರಾಜು ಪ್ರಕ್ರಿಯೆ ಶುರು ಮಾಡಿದರೆ ನಮಗೆ ಅನ್ಯಾಯವಾಗಲಿದೆ.
ಮಂಜುಶ್ರೀ, ಅರ್ಜಿದಾರೆ.