

ಉಡುಪಿ: ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125 ನೇ ವರ್ಷದ ಶತಮಾನೋತ್ಸವ ರಜತ ಮಹೋತ್ಸವದ ಅಂಗವಾಗಿ ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ವಕೀಲರಿಗಾಗಿ ಮಾ. 1 ಮತ್ತು 2 ರಂದು ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವಿಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರಿಕೆಟ್, ವಾಲಿಬಾಲ್ (ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ) ಮತ್ತು ಶಟಲ್ ಬ್ಯಾಡ್ಮಿಂಮಿಟನ್ (ಪುರುಷ ಮಹಿಳೆಯರಿಗೆ) ಪಂದ್ಯಾಟಗಳನ್ನು ನಡೆಸಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ಪುರುಷರ ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಗುತ್ತಿದೆ ಎಂದರು.
ಉದ್ಘಾಟನೆ
ಪಂದ್ಯಾಕೂಟವನ್ನು ಮಾ. 1 ರ ಸಾಯಂಕಾಲ 4 ಗಂಟೆಗೆ ಸುಪ್ರೀಂಕೋರ್ಟಿನ ನ್ಯಾಯಧೀಶೆ ನ್ಯಾ. ಬಿ.ವಿ.ನಾಗರತ್ನ ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟಿನ ನ್ಯಾಯಾಲಯದ ಮುಖ್ಯ ನ್ಯಾಯಧೀಶ ನ್ಯಾ. ಎನ್.ವಿ. ಅಂಜಾರಿಯಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ನ್ಯಾ. ಇ.ಎಸ್.ಇಂದಿರೇಶ್, ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶ ನ್ಯಾ. ರಾಜೇಶ್ ರೈ ಕೆ., ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಉಪಸ್ಥಿತರಿರಲಿದ್ದಾರೆ ಎಂದರು.
ಸಮಾರೋಪ
ಮಾ.2 ರಂದು ಸಾಯಂಕಾಲ 7 ಗಂಟೆಗೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ. ಹೆಗ್ಡೆ ಸಮಾರೋಪ ಭಾಷಣ ಮಾಡಲಿದ್ದಾರೆ. ಉಡುಪಿ-&ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿರುವರು. ಶಾಸಕ ಯಶ್ಪಾಲ್ ಸುವರ್ಣ ಅತಿಥಿಯಾಗಿ ಭಾಗವಹಿಸಲಿರುವರು ಎಂದು ನುಡಿದರು.
ಈ ಸಂದರ್ಭದಲ್ಲಿ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಹಾಗು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಪುರುಷೋತ್ತಮ್ ಎಂ. ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಿಕ ದಂಡಾಧಿಕಾರಿ ಸಂತೋಷ್ ಶ್ರೀವತ್ಸ, ಹಿರಿಯ ವಕೀಲ ಮಟ್ಟಾರ್ ರತ್ನಾಕರ್ ಹೆಗ್ಡೆ, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಸಾಂಸತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿ ಸುಮಿತ್ ಎಸ್ ಹೆಗ್ಡೆ, ಖಜಾಂಚಿ ಗಂಗಾಧರ ಎಚ್.ಎಂ., ಜಂಟಿ ಕಾರ್ಯದರ್ಶಿ ರವೀಂದ್ರ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.