

ಮಂಡ್ಯ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸೇರಿದಂತೆ ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಹಾಗೂ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಎದುರು ಜಮಾಯಿಸಿದ ಸದಸ್ಯರು, ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ನಂತರ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸುವ ಮೂಲಕ ಕಾನೂನು ವಿರೋಧಿ ಚಟುವಟಿಕೆ ಹೆಚ್ಚಾಗಿರುವುದು ಆತಂಕಕಾರಿ ವಿಷಯ. ದೌರ್ಜನ್ಯ ಹೆಚ್ಚಳದಿಂದ ಪ್ರಾಣ ಹಾನಿಯೂ ಸಂಭವಿಸಿದೆ. ಇಂತಹ ಅಮಾನುಷ ದೌರ್ಜನ್ಯ ತಡೆಯಲು ಅಲ್ಲಿನ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಹಿಂದುಗಳ ರಕ್ಷಣೆಗೆ ಮುಂದಾಗಬೇಕು. ಇನ್ನು ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತವಾಗಿದೆ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ದೇಶದ ವಿವಿಧೆಡೆ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ.ಮಹೇಶ್, ಶೋಭಾ, ಜಿ.ಬಿ.ಬಸವರಾಜು, ಮರೀಗೌಡ, ತಿರುಮಲಸ್ವಾಮಿ, ನಂದೀಶ್, ಎಂ.ರೂಪಾ, ರೇವಣ್ಣ, ಅರುಣ್‌ಕುಮಾರ್, ಕೀರ್ತಿ, ಮಹೇಂದ್ರ, ಸತೀಶ್ ಮಂಗಲ, ಮಹೇಶ್, ಅನಿಲ್ ಇತರರಿದ್ದರು.