

ಹೊಸನಗರ: ತಾಲೂಕಿನ ಅರಮನೆಕೊಪ್ಪದ ಗ್ರಾಮ ವ್ಯಾಪ್ತಿಯ 18 ವರ್ಷದ ಯುವತಿ ಶಂಕಿತ ಕೆಎಫ್‌ಡಿ (ಮಂಗನ ಕಾಯಿಲೆ)ಗೆ ತುತ್ತಾಗಿದ್ದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಯುವತಿಯ ಆರೋಗ್ಯ ಸ್ಥಿತಿ ಕೂಡ ಗಂಭೀರವಾಗಿದೆ.
ಬಪ್ಪನಮನೆ ಯುವತಿಗೆ 10 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ವಲ್ಪ ಗುಣಮುಖರಾದಂತೆ ಕಂಡುಬಂದು ಮತ್ತೆ ಜ್ವರ ಕಾಣಿಸಿಕೊಂಡಿತ್ತು. ಜ.1ರಂದು ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಾದ ನಂತರ ಹೊಸನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಅಲ್ಲಿಂದ ಅದೇ ದಿನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವತಿಗೆ ಕೆಎಫ್‌ಡಿ ಪರೀಕ್ಷೆ ಮಾಡಲಾಗಿತ್ತು. ಮೊದಲ ಟೆಸ್ಟ್ನಲ್ಲಿ ನೆಗೆಟಿವ್ ಬಂದಿತ್ತು. ಜ.5ರಂದು ಎರಡನೇ ಬಾರಿ ಆರ್‌ಟಿಸಿಪಿಆರ್ ಪರೀಕ್ಷೆ ಮಾಡಿದಾಗ ಶಂಕೆ ಮಾಡಲಾಗಿದೆ. ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಎಫ್‌ಡಿ ಪಾಸಿಟಿವ್ ಶಂಕೆ ವ್ಯಕ್ತವಾದ ಕಾರಣ ಆ ಗ್ರಾಮಗಳಲ್ಲಿ ಜ್ವರದ ಸರ್ವೇ ಮಾಡಲಾಗಿದೆ. ಆಕೆಯ ಸಹೋದರಿಗೂ ಜ್ವರ ಕಾಣಿಸಿಕೊಂಡಿದ್ದು ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೆ ಕೆಎಫ್‌ಡಿ ಪಾಸಿಟಿವ್ ಸಂಶಯ ಇರುವ ಹಿನ್ನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲೇ ಆರೋಗ್ಯ ಹದಗೆಟ್ಟಿತ್ತು. ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಟಿಎಚ್‌ಒ ಡಾ. ಸುರೇಶ್ ಮಾಹಿತಿ ನೀಡಿದ್ದಾರೆ.
ಅರಮನೆಕೊಪ್ಪ ಸುತ್ತಮುತ್ತ ಗ್ರಾಮಗಳಲ್ಲಿ ಈ ಹಿಂದೆ ಕೆಎಫ್‌ಡಿ ಕಾಣಿಸಿಕೊಂಡ ಇತಿಹಾಸ ಇಲ್ಲ. ಈಗ ಶಂಕೆ ಹಿನ್ನೆಲೆಯಲ್ಲಿ ಸಹಜವಾಗಿ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.