ಬಪ್ಪನಬೈಲಲ್ಲಿ ಟೋಲ್ ಚಲೋ

protest
Published on

ಶಿರೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಶಿರೂರು ಗ್ರಾಮದ ಬಪ್ಪನಬೈಲು ಭಾಗದಲ್ಲಿ ಟೋಲ್ ಚಲೋ ಸಾಂಕೇತಿಕ ಪ್ರತಿಭಟನೆ ಶಿರೂರು ಟೋಲ್‌ಗೇಟ್ ಬಳಿ ನಡೆಯಿತು.

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ರಘುರಾಮ ಕೆ. ಪೂಜಾರಿ, ಕೃಷಿ ಕುಟುಂಬ ಅಧಿಕ ಸಂಖ್ಯೆಯಲ್ಲಿರುವ ಬಪ್ಪನಬೈಲು ಭಾಗದಲ್ಲಿ ಹೆದ್ದಾರಿ ಕಾಮಗಾರಿ ಆರಂಭದಲ್ಲಿ ನೀಡಿದ್ದ ಬಹುತೇಕ ಬೇಡಿಕೆಗಳು ಈಡೇರಿಸಿಲ್ಲ. ಇದರಿಂದಾಗಿ ಪ್ರತಿವರ್ಷ ಇಲ್ಲಿನ ರೈತರು ಸಂಕಷ್ಟ ಪಡುವಂತಾಗಿದೆ. ಮಾತ್ರವಲ್ಲದೆ ಸಂಪರ್ಕ ರಸ್ತೆಗಳೂ ಇಲ್ಲವಾಗಿದೆ. ಹೀಗಾಗಿ ಶೀಘ್ರ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಸಂಬಂಧಪಟ್ಟ ಕಾಮಗಾರಿ ನಡೆಸುವ ಕಂಪನಿ ಅಧಿಕಾರಿಗಳಿಗೆ ಅಗತ್ಯವಿರುವ ಕಾಮಗಾರಿ ಆರಂಭಿಸಲು ಮತ್ತು ಕೃಷಿಕರಿಗೆ ಅನುಕೂಲ ಮಾಡಿಕೊಡಲು ಸೂಚಿಸಿದರು. ಇಲಾಖಾ ವ್ಯಾಪ್ತಿಯಲ್ಲಿ ಸಾಧ್ಯವಿರುವ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಜಿಪಂ ಸದಸ್ಯ ಸುರೇಶ್ ಬಟ್ವಾಡಿ, ಬೈಂದೂರು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಶಿರೂರು ಗ್ರಾಪಂ ಅಧ್ಯಕ್ಷೆ ಜಿ. ಯು. ದಿಲ್‌ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್, ಸ್ಥಳೀಯರಾದ ಸುಬ್ರಾಯ ನಾಯ್ಕ ಹಾಜರಿದ್ದರು. ಬಳಿಕ ಐಆರ್‌ಬಿ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಲಾಯಿತು. ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net