ಬಾನು ಮುಷ್ತಾಕ್ ಅವರ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ

Published on

ಮೈಸೂರು: ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ಆಯ್ದ ಕಥೆಗಳನ್ನು ಆಧರಿಸಿದ, ಮಹಿಳೆಯರೇ ರೂಪಿಸಿದ ‘ಒಮ್ಮೆ ಹೆಣ್ಣಾಗು’ ನಾಟಕ ರಂಗಾಯಣದಲ್ಲಿ ಪ್ರದರ್ಶನಗೊಳ್ಳಲಿದೆ.

ರಂಗಾಯಣದ ಭೂಮಿಗೀತದಲ್ಲಿ ಪ್ರಥಮ ಪ್ರದರ್ಶನ ನಡೆಯಲಿದ್ದು, 45 ವಾರಗಳವರೆಗೆ ವಾರಾಂತ್ಯ ರಂಗಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹರಿಯಾಣದ ಎನ್‌ಎಸ್‌ಡಿ ಕಲಾವಿದೆ ಸವಿತಾ ರಾಣಿ ಪರಿಕಲ್ಪನೆ, ವಿನ್ಯಾಸ, ನಿರ್ದೇಶನ ಮತ್ತು ಎಚ್.ಕೆ. ಶ್ವೇತಾರಾಣಿ ಸಹ ನಿರ್ದೇಶನದಲ್ಲಿ ಮೂಡಿಬಂದಿರುವ ಹೊಸ ರಂಗ ಪ್ರಯೋಗವಿದು. ಹಿರಿಯ ಕಲಾವಿದೆಯರಾದ ಕೆ.ಆರ್.ನಂದಿನಿ ಹಾಗೂ ಬಿ.ಎನ್.ಶಶಿಕಲಾ ಅಭಿನಯಿಸಲಿದ್ದು, ಮಹೇಶ್ ಕಲ್ಲತ್ತಿ ಅವರ ಬೆಳಕು ವಿನ್ಯಾಸವಿದೆ ಎಂದು ತಿಳಿಸಿದರು.

ಬಾನು ಮುಷ್ತಾಕ್ ಅವರ ಎದೆಯ ಹಣತೆ ಪುಸ್ತಕದಿಂದ ಶಾಯಿಸ್ತಾ ಮಹಲ್‌ನ ಕಲ್ಲು ಚಪ್ಪಡಿಗಳು, ಕಪ್ಪು ನಾಗರಹಾವು, ಎದೆಯ ಹಣತೆ ಹಾಗೂ ಒಮ್ಮೆ ಹೆಣ್ಣಾಗು ಎಂಬ ನಾಲ್ಕು ಕಥೆಗಳನ್ನು ತೆಗೆದುಕೊಂಡು ನಾಟಕ ರೂಪ ಕೊಡಲಾಗಿದೆ. ಪುರುಷ ಪ್ರಧಾನ ಸಮಾಜದ ಮುಖವನ್ನು ಬಹಿರಂಗಪಡಿಸಲು ಹಾಗೂ ಅದನ್ನು ಪ್ರಶ್ನಿಸುವಂತೆ ನಾಟಕವನ್ನು ಹೆಣೆಯಲಾಗಿದೆ. 1 ಗಂಟೆ 20 ನಿಮಿಷದ ಈ ಪ್ರಯೋಗ ಒಂದು ನಿರೂಪಣೆಯಾಗಿದೆ ಎಂದರು.

ಮಹಿಳೆಯರ ಜೀವನಾನುಭವಗಳ ಮೇಲಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ಬಿಂಬಿಸುವುದು, ಪುರುಷ ಪ್ರಧಾನ ಸಮಾಜದಲ್ಲಿನ ಕರಾಳ ಮುಖವನ್ನು ಹಾಗೂ ಮಹಿಳೆಯರ ಮೇಲಿನ ಶೋಷಣೆಗಳನ್ನು ಪ್ರಶ್ನಿಸುವ ಈ ನಾಟಕವು ಮಾನವೀಯತೆ ಮತ್ತು ಅಂತಃಕರಣವನ್ನು ತೆರೆದಿಡುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ರಂಗ ಸಮಾಜದ ಸದಸ್ಯ ಸುರೇಶ್‌ಬಾಬು, ನಿರ್ದೇಶಕಿ ಸವಿತಾ ರಾಣಿ, ಸಹ ನಿರ್ದೇಶಕಿ ಎಚ್.ಕೆ.ಶ್ವೇತಾರಾಣಿ, ಕಲಾವಿದೆಯರಾದ ಕೆ.ಆರ್.ನಂದಿನಿ, ಬಿ.ಎನ್.ಶಶಿಕಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net