ಬಾನು ಮುಷ್ತಾಕ್ ಆಹ್ವಾನ ಸರಿಯಲ್ಲ: ವಿಶ್ವ ಹಿಂದು ಪರಿಷದ್

Published on

ಮೈಸೂರು: ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಬರಲು ಅವರ ಕೃತಿಯನ್ನು ಅನುವಾದ ಮಾಡಿದ ದೀಪಾ ಭಾಸ್ತಿ ಅವರೂ ಕಾರಣ. ಹೀಗಾಗಿ ದಸರಾ ಉದ್ಘಾಟನೆಗೆ ಅವರನ್ನು ಸಹಾ ಆಹ್ವಾನಿಸಬೇಕು ಎಂದು ವಿಶ್ವ ಹಿಂದು ಪರಿಷದ್ ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಕಾಮತ್, ಸರ್ಕಾರವನ್ನು ಆಗ್ರಹಿಸಿದರು.

ಕನ್ನಡ ವಿರೋಧಿ ಹೇಳಿಕೆ ನೀಡಿರುವ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದೇ ಸರಿಯಲ್ಲ. ಅಲ್ಲದೇ ಹಿಂದು ಧರ್ಮದ ಆಚರಣೆ ವಿರೋಧಿಯಾದ ಅವರು ದಸರಾವನ್ನು ಹೇಗೆ ಉದ್ಘಾಟಿಸುತ್ತಾರೆ. ಹಾಗಾಗಿ ಅವರ ಆಯ್ಕೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ವಿಎಚ್‌ಪಿ ಹೋರಾಟ ನಡೆಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಚಾಮುಂಡಿಬೆಟ್ಟ ಹಿಂದುಗಳದ್ದಲ್ಲ ಎನ್ನುವ ಹೇಳಿಕೆ ಮೂಲಕ ಓಲೈಕೆ ರಾಜಕಾರಣ ಜನತೆಗೆ ಘಾಸಿಯುಂಟು ಮಾಡುತ್ತಿದೆ. ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಇದ್ದಾಳೆ ಎಂದೇ ಎಲ್ಲರೂ ನಂಬಿದ್ದೇವೆ. ಹೀಗಿರುವಾಗ ಓರ್ವ ಹಿಂದು ಆಗಿ ಡಿ.ಕೆ.ಶಿವಕುಮಾರ್ ಈ ರೀತಿ ಹೇಳುವುದು ಸರಿಯಲ್ಲ. ಅವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರ ಕೈಗೊಂಡ ಕೆಲ ನಿರ್ಧಾರ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸಮಾಜಘಾತಕ ಶಕ್ತಿಗಳು, ಎಡ ಪಂಥೀಯರು ಹಾಗೂ ಕೆಲ ಸ್ವಹಿತಾಸಕ್ತ ರಾಜಕಾರಣಿಗಳ ಓಲೈಕೆಗಾಗಿ ಬುರುಡೆ ಮನುಷ್ಯನನ್ನು ಸೃಷ್ಟಿಸಲಾಗಿದೆ. ಇಲ್ಲಿಯ ತನಕ ಗಿರೀಶ್ ಮಟ್ಟಣ್ಣನವರ್, ಸಮೀರ್ ಮೊದಲಾದವರನ್ನು ಏಕೆ ಬಂಧಿಸಿಲ್ಲ. ಸೂಕ್ತ ವಿಚಾರ ಮೂಲಕ ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ತೊಡೆದುಹಾಕಬೇಕು ಎಂದು ಒತ್ತಾಯಿಸಿದರು.

ವಿಎಚ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಶಂಕರ್, ಮುಖಂಡರಾದ ಅರುಣಾಚಲಂ, ವಿಜೇಂದ್ರ, ಜಯಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net