ಬಾನು ಮುಷ್ತಾಕ್ ಸ್ಪಷ್ಟನೆ ನೀಡಿ ದಸರಾ ಉದ್ಘಾಟಿಸಲಿ : ಸಂಸದ ಯದುವೀರ್

yaduveer
Published on

ಮೈಸೂರು: ಕನ್ನಡ ಭಾಷೆ ಹಾಗೂ ಕನ್ನಡ ತಾಯಿ ಭುವನೇಶ್ವರಿ ಕುರಿತು ದಸರಾ ಉದ್ಘಾಟಕರಾದ ಸಾಹಿತಿ ಬಾನು ಮುಷ್ತಾಕ್ ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಹಾಗೂ ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಬಸ್ತಿ ಅವರನ್ನು ಸಹ ಸರ್ಕಾರ ಪರಿಗಣಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದಾಗ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದೆ. ಆದರೆ, ಅವರು ಕನ್ನಡ ಭಾಷೆ ಹಾಗೂ ಕನ್ನಡ ತಾಯಿ ಭುವನೇಶ್ವರಿ ಕುರಿತು 2023ರಲ್ಲಿ ಆಡಿರುವ ಮಾತುಗಳ ಕುರಿತು ಸ್ಪಷ್ಟನೆ ನೀಡುವ ಅವಶ್ಯಕತೆ ಇದೆ. ಅವರು ಸ್ಪಷ್ಟನೆ ನೀಡದೆ ಹೋದರೆ ದಸರಾ ಉದ್ಘಾಟನೆಗೆ ನಮ್ಮ ವಿರೋಧವಿದೆ. ಆದರೆ, ಅವರು ಇದುವರೆಗೆ ಅವರು ಸ್ಪಷ್ಟನೆ ನೀಡಿಲ್ಲ. ಅವರು ತಮ್ಮ ಮಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ದಸರಾ ಉದ್ಘಾಟನೆಗೆ ಆಗಮಿಸುವ ಸಂದರ್ಭ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸುವುದಕ್ಕೆ ಏನು ಸಮಸ್ಯೆ ಇಲ್ಲ ಎಂದು ಬಾನು ಮುಷ್ತಾಕ್ ಹೇಳಿಕೆ ನೀಡಿದ್ದಾರೆ. ಚಾಮುಂಡಿಬೆಟ್ಟ ಧಾರ್ಮಿಕ ಸ್ಥಳವಾಗಿದೆ. ದಸರಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ. ಇದನ್ನು ಅವರು ಒಪ್ಪಿಕೊಂಡು ಬರುವುದಾದರೆ ನಮ್ಮದೇನು ಅಭ್ಯಂತರವಿಲ್ಲ. ದಸರಾ ಸಂದರ್ಭ ಹಿಂದುಗಳ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಅವರ ನಡೆ ಇರುತ್ತದೆ ಎಂದು ಭಾವಿಸುತ್ತೇನೆ ಎಂದರು.

ಚಾಮುಂಡಿಬೆಟ್ಟ ಹಿಂದುಗಳ ಆಸ್ತಿ ಅಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಬೇಜವಾ ಬ್ದಾರಿತನ ದಿಂದ ಕೂಡಿದೆ. ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಇದ್ದು, ದೇಶದ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಮಾರ್ಕಂಡಯ ಇಲ್ಲಿ ಬಂದು ತಪಸ್ಸು ಮಾಡಿದ ದಾಖಲೆ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net