

ಬಂಟ್ವಾಳ: ತಾ.ಪಂ. ಅಧಿಕಾರಿಗಳು ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ತಾ.ಪಂ.ಗೆ ಬುಧವಾರ ಹಠಾತ್ ಭೇಟಿ ನೀಡಿ ಮಾಹಿತಿ ಪಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ರಸ್ತೆ ಸಹಿತ ಜಾಗಕ್ಕೆ ಕಬ್ಬಿಣದ ಬೇಲಿ ಹಾಕಿರುವ ಕ್ರಮದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸರ್ಕಾರಿ ಕಚೇರಿಗೆ ಸಂಬಂಧಿಸಿದಂತೆ ಮತ್ತು ಇತರ ಕಚೇರಿಗಳಿಗೆ ಬರುವ ಸಾರ್ವಜನಿಕರು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು? ಮತ್ತು ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವ ವಾಹನಗಳು ಎಲ್ಲಿ ಪಾರ್ಕ್ ಮಾಡಬೇಕು ಎಂದು ಶಾಸಕ ರಾಜೇಶ್ ನಾಕ್ ಗರಂ ಆದರು. ಸರ್ಕಾರ ಜಾಗವನ್ನು ಸ್ವಂತ ಜಾಗದಂತೆ ಬೇಲಿ ಹಾಕಲು ನಿಮಗೆ ಅಧಿಕಾರ ನೀಡಿದವರು ಯಾರು? ಎಂದು ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ತಾ.ಪಂ. ಇಒ ಸಚಿನ್ ಕುಮಾರ್ ರಜೆಯಲ್ಲಿ ಇದ್ದ ಕಾರಣ ಫೋನ್ ಮೂಲಕ ಅವರನ್ನು ಸಂಪರ್ಕಿಸಿದಾಗ ಬೇಲಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಮುಖತಃ ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಶಾಸಕರ ಜತೆ ಸ್ಥಳಕ್ಕೆ ಬಂದಿದ್ದ ಸಾರ್ವಜನಿಕರು ಬೇಲಿ ವಿಚಾರಕ್ಕೆ ಅಧಿಕಾರಿಗಳು ಆಡಿದ ದರ್ಪದ ಮಾತುಗಳ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ, ಪ್ರಮುಖರಾದ ಡೊಂಬಯ್ಯ ಅರಳ ಮತ್ತಿತರರಿದ್ದರು.