

ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದ ವಠಾರದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸುವರ್ಣ ಮಹೋತ್ಸವ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶುಕ್ರವಾರ ಸಂಪನ್ನಗೊಂಡಿತು.
ಗಣೇಶೋತ್ಸವದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ 7 ದಿನಗಳ ಕಾಲ ಗಣೇಶನ ಆರಾಧನೆಯು ವಿವಿಧ ಧಾರ್ಮಿಕ ಹವನಗಳೊಂದಿಗೆ ನಡೆದಿದ್ದು, ಗಣಪತಿ ದೇವರಿಗೆ ಬೆಳ್ಳಿ ಹಾಗೂ ಚಿನ್ನಾಭರಣ ಸಮರ್ಪಿಸಲಾಗಿತ್ತು.
ಶುಕ್ರವಾರ ಬೆಳಗ್ಗೆ ವಿಶೇಷವಾದ ಸಹಸ್ರ ಮೋದಕ ಹವನ ಆರಂಭಗೊಂಡು ಮಧ್ಯಾಹ್ನ ಪೂರ್ಣಾಹುತಿ ನಡೆಯಿತು. ಬಳಿಕ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ರಂಗಪೂಜೆ, ರಾತ್ರಿ ಪೂಜೆ ಹಾಗೂ ವಿಸರ್ಜನಾಪೂಜೆಯ ಬಳಿಕ ಶ್ರೀ ಗಣೇಶನ ಶೋಭಾಯಾತ್ರೆ ನಡೆಯಿತು.
ಬಂಟ್ವಾಳ ರಥಬೀದಿ, ಮಾರ್ಕೆಟ್ ರಸ್ತೆಯಲ್ಲಿ ಹನುಮಾನ್ ದೇವಸ್ಥಾನದವರೆಗೆ ಸಾಗಿದ ಮೆರವಣಿಗೆ ಅದೇ ರಸ್ತೆಯಲ್ಲಿ ವಾಪಾಸ್ ಬಂದು ತ್ಯಾಗರಾಜರಸ್ತೆಯ ಮೂಲಕ ವೆಂಕಟರಮಣ ದೇವಸ್ಥಾನದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.