ಟ್ರಾಫಿಕ್ ಪೊಲೀಸ್‌ಗೆ ಸ್ವಂತ ಕಟ್ಟಡ : ಹತ್ತು ವರ್ಷದ ಬಾಡಿಗೆ ನಿವೇಶನ ವಾಸಕ್ಕೆ ಮುಕ್ತಿ : ಕೊನೆಯ ಹಂತದ ಕಾಮಗಾರಿ ಪ್ರಗತಿಯಲ್ಲಿ

police station
ಪಾಣೆಮಂಗಳೂರಿನ ಅಕ್ಕರಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಚಾರಿ ಪೊಲೀಸ್ ಠಾಣೆಯ ಕಟ್ಟಡ.
Published on

ಸಂದೀಪ್ ಸಾಲ್ಯಾನ್, ಬಂಟ್ವಾಳ

ಹತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳದ ಸಂಚಾರಿ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಪಾಣೆಮಂಗಳೂರಿನ ಅಕ್ಕರಂಗಡಿಯಲ್ಲಿ ಸ್ವಂತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, ಭಾಗಶಃ ಕಾಮಗಾರಿ ಪೂರ್ಣಗೊಂಡಿದೆ. ಸೂಕ್ತವಾದ ನಿವೇಶನ ಸಿಗದೆ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದ ಪೊಲೀಸರ ಹಲವು ವರ್ಷಗಳ ಕನಸೊಂದು ನನಸಾಗುವ ಕಾಲ ಸನ್ನಿಹಿತವಾಗಿದೆ.

ಬಂಟ್ವಾಳಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರುಗೊಂಡ ಬಳಿಕ ಉದ್ಘಾಟನೆಗೊಂಡ ದಿನದಿಂದ ಮೆಲ್ಕಾರ್ ಸಮೀಪದ ಬೋಳಂಗಡಿ ಹೆದ್ದಾರಿ ಬದಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಸಾಕಷ್ಟು ಕಡೆಗಳಲ್ಲಿ ಜಾಗ ಗುರುತಿಸಿದರೂ ಅದು ಠಾಣೆಯ ಕಾರ್ಯನಿರ್ವಹಣೆಗೆ ಸೂಕ್ತವಾಗದ ಹಿನ್ನೆಲೆಯಲ್ಲಿ ಹುಡುಕಾಟ ಮುಂದುವರಿದಿತ್ತು. ಪಾಣೆಮಂಗಳೂರಿನ ಗೂಡಿನಬಳಿಯಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿದ್ದ ಪಶು ಇಲಾಖೆಯ ಹಳೇ ಕಟ್ಟಡದ ನಿವೇಶನವನ್ನು ಹಿಂದೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗೆ ಮಂಜೂರು ಮಾಡಲಾಗಿತ್ತಾದರೂ, ಅಲ್ಲಿ ಠಾಣೆಗೆ ಬೇಕಾದಷ್ಟು ಸ್ಥಳ ಇಲ್ಲದೆ ಇದ್ದುದರಿಂದ ಅದು ಹಾಗೇ ಉಳಿದುಕೊಂಡಿತ್ತು. ಈ ಪಾಳುಬಿದ್ದ ಕಟ್ಟಡವನ್ನು ದುರಸ್ತಿಪಡಿಸಿ ಬಂದೋಬಸ್ತ್‌ಗೆ ಆಗಮಿಸುವ ಕೆಎಸ್‌ಆರ್‌ಸಿ ಪೊಲೀಸರಿಗೆ ಉಳಿದುಕೊಳ್ಳಲು ಗೆಸ್ಟ್ ರೂಮ್ ರೀತಿಯಲ್ಲಿ ನವೀಕರಣ ಮಾಡಲಾಗಿದೆ.

ಕಟ್ಟಡ ನಿರ್ಮಾಣ ಅನಿವಾರ್ಯ

ಬಂಟ್ವಾಳ ಸಂಚಾರ ಠಾಣೆಯು ಕಾರ್ಯಾಚರಿಸುತ್ತಿದ್ದ ಮೆಲ್ಕಾರ್‌ನ ಬಾಡಿಗೆ ಕಟ್ಟಡವು ಶಿಥಿಲಗೊಂಡು ಮಳೆಗಾಲದಲ್ಲಿ ನೀರು ಸೋರುವ ಸಮಸ್ಯೆಯಿಂದ ಟರ್ಪಾಲು ಹೊದಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು. ಜತೆಗೆ ಈ ಕಟ್ಟಡದ ಮುಂಭಾಗದ ಬಹುತೇಕ ಜಾಗ ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಗೊಂಡಿದ್ದು ಅನಿವಾರ್ಯವಾಗಿ ಠಾಣೆಗೆ ಸ್ವಂತ ಕಟ್ಟಡ ಅತಿ ಅವಶ್ಯಕವಾಗಿತ್ತು. ರಾ.ಹೆ ಕಾಮಗಾರಿ ಆರಂಭಗೊಂಡ ಕೂಡಲೇ ಸಜೀಪಮುನ್ನೂರು ಗ್ರಾಮದ ಮಾರ್ನಬೈಲಿನ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದ್ದು ಪ್ರಸ್ತುತ ಠಾಣೆ ಅಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಜಾಗ ಹೆದ್ದಾರಿಗೆ ಸಮೀಪದಲ್ಲಿದ್ದು, ತಾಲೂಕು ಕೇಂದ್ರದಿಂದ ಠಾಣೆಯನ್ನು ಸಂಪರ್ಕಿಸಬೇಕಾದರೆ ಹೆದ್ದಾರಿಯ ಜತೆಗೆ ಹಳೇ ಸೇತುವೆಯ ರಸ್ತೆಯು ಕೂಡ ಸೂಕ್ತವಾಗಿದೆ. ನಿವೇಶನ ರಸ್ತೆಯಿಂದ ಕೆಳ ಭಾಗದಲ್ಲಿದ್ದ ಕಾರಣ ಕಾಂಕ್ರೀಟ್ ಪಿಲ್ಲರ್‌ಗಳನ್ನು ಹಾಕಿ ರಸ್ತೆಗೆ ಸಮವಾಗಿ ಠಾಣಾ ಕಟ್ಟಡವನ್ನು ನಿರ್ಮಿಸಲಾಗಿದೆ. ನೇತ್ರಾವತಿ ನದಿ, ನಿವೇಶನದ ಪಕ್ಕದಲ್ಲೇ ಇರುವುದರಿಂದ ತಳ ಭಾಗಕ್ಕೆ ಮಳೆಗಾಲದಲ್ಲಿ ನೆರೆ ನೀರು ಕೂಡ ಬೀಳುವುದರಿಂದ ಅನಿವಾರ್ಯವಾಗಿ ಕಟ್ಟಡವನ್ನು ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ.

ಸ್ವಂತ ಜಮೀನು ಮಂಜೂರು

ಪಾಣೆಮಂಗಳೂರು ಗೂಡಿನಬಳಿ ಹಳೇ ಸೇತುವೆಯ ಸಮೀಪ ಅಕ್ಕರಂಗಡಿಯಲ್ಲಿ 78 ಸೆಂಟ್ಸ್ ನಿವೇಶನವೊಂದನ್ನು ಸಂಚಾರಿ ಪೊಲೀಸ್ ಠಾಣೆಗೆ ಅಂತಿಮಗೊಳಿಸಲಾಗಿದ್ದು, 3.18 ಕೋ.ರೂ. ವೆಚ್ಚದಲ್ಲಿ ನೂತನ ಠಾಣಾ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ 11 ತಿಂಗಳ ಕಾಲಾವಕಾಶ ನಿಗದಿ ಪಡಿಸಿ 2024ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಇದೀಗ ಹೆಚ್ಚುವರಿ ನಾಲ್ಕು ತಿಂಗಳು ಕಳೆದಿದೆ. ಇದೀಗ ಕೊನೆಯ ಹಂತದ ಕೆಲಸ ನಡೆಯುತ್ತಿದೆ.

4,035 ಚ.ಅಡಿ ವಿಸ್ತೀರ್ಣ

ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದೆ. ಸುಮಾರು 4,035 ಚ. ಅಡಿ ವಿಸ್ತೀರ್ಣದಲ್ಲಿ ಠಾಣಾ ಕಟ್ಟಡ ನಿರ್ಮಾಣಗೊಳ್ಳಲಿದೆ. ಇನ್‌ಸ್ಪೆಕ್ಟರ್ ಕೊಠಡಿ, ಪಿಎಸ್‌ಐಗಳ ಕೊಠಡಿ, ವಯರ್‌ಲೆಸ್ ಕೊಠಡಿ, ವರ್ಕ್ ಸ್ಟೇಷನ್ ನಿರ್ಮಾಣವಾಗಿದೆ. ಪ್ರಥಮ ಮಹಡಿಯಲ್ಲಿ ಮಹಿಳಾ ಹಾಗೂ ಪುರುಷರ ಪ್ರತ್ಯೇಕ ರೆಸ್ಟ್ ರೂಮ್‌ಗಳು, ಸ್ಟೋರ್, ರೆಕಾರ್ಡ್ ರೂಮ್, ಪ್ರತ್ಯೇಕ ಶೌಚಗೃಹಗಳು ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net