ಬಂಟ್ವಾಳ ಮನೆಗಳಿಗೆ ನುಗ್ಗಿದ ಕಳ್ಳರ ತಂಡ ಓರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಜನ

arrested
Published on


ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ಕೇರಳದ ಅಂತಾರಾಜ್ಯ ಕಳ್ಳರಿಬ್ಬರು ಮನೆಗಳಿಗೆ ನುಗ್ಗಿ ಚಿನ್ನಾಭರಣಕ್ಕಾಗಿ ಕಪಾಟುಗಳನ್ನು ಮುರಿದು ಜಾಲಾಡಿದ್ದು, ಸ್ಥಳೀಯರು ಓರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.


ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿನ ಮೂರು ಮನೆಗಳಿಗೆ ಕಳ್ಳರ ತಂಡ ನುಗ್ಗಿ ಚಿನ್ನಾಭರಣಕ್ಕಾಗಿ ಜಾಲಾಡಿದ್ದಾರೆ. ಈ ವೇಳೆ ಕಪಾಟಿನಲ್ಲಿ ಸಿಕ್ಕಿದ ಆಭರಣಗಳು ನಕಲಿ ಎಂದು ಕಳ್ಳರು ಅವೆಲ್ಲವನ್ನೂ ಎಸೆದುಹೋಗಿದ್ದಾರೆ. ಕಳ್ಳರ ಉಪಟಳದಿಂದ ಒಟ್ಟಾದ ಮಂಚಿ ಪರಿಸರದ ಜನ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಕಳ್ಳರ ತಂಡದ ಓರ್ವನನ್ನು ಬೆನ್ನಟ್ಟಿ ಹಿಡಿದು ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.


ಕೇರಳ ಮೂಲದ ಕೊಲ್ಲಂ ಜಿಲ್ಲೆಯ ಕರಕ್ಕಲ್ ನಿವಾಸಿ ಪ್ರವೀಣ್ ಎಂಬಾತ ಪೊಲೀಸ್ ವಶದಲ್ಲಿದ್ದು, ಈತನ ಸ್ನೇಹಿತ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಚಿ ಮಸೀದಿ ಬಳಿಯ ಕಮರುದ್ದೀನ್ ಹಾಗೂ ಜಲಾಲುದ್ದೀನ್ ಎಂಬುವವರ ಮನೆ ಹಾಗೂ ಕಾಡಂಗಡಿ ಎಂಬಲ್ಲಿ ಹಮೀದ್ ಎಂಬುವವರ ಮನೆಗೆ ಕಳ್ಳರು ನುಗ್ಗಿದ್ದಾರೆ.


ಈ ಪೈಕಿ ಒಂದು ಮನೆ ಇತ್ತೀಚೆಗಷ್ಟೇ ಗೃಹಪ್ರವೇಶವಾಗಿತ್ತು. ಮಂಚಿ ಮಸೀದಿಯ ಸಹೋದರರಾದ ಕಮರುದ್ದೀನ್ ಹಾಗೂ ಜಲಾಲುದ್ದೀನ್ ಅವರ ಮನೆಯ ಹಿಂಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರಿಗೆ ಅಲ್ಲಿ ಬೆಲೆಬಾಳುವ ವಸ್ತುಗಳು ಸಿಗದ ಕಾರಣ ವಾಪಸಾಗಿದ್ದಾರೆ. ಬಳಿಕ ಅಲ್ಲೇ ಸ್ವಲ್ಪ ದೂರದಲ್ಲಿ ಕಾಡಂಗಡಿ ಎಂಬಲ್ಲಿನ ಹಮೀದ್ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನ ಒಳಗೆ ಇದ್ದ ಸುಮಾರು 3 ಸಾವಿರ ರೂ. ನಗದು ಕಳವು ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್‌ಐ ಹರೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.


ಇನ್‌ವರ್ಟರ್ ಆಫ್ ಮಾಡಲು ಬಂದಾಗ ಪತ್ತೆ
ಬೈಕ್‌ನಲ್ಲಿ ಬಂದು ಯಾರು ಇಲ್ಲದ ಮನೆಯನ್ನು ಆಯ್ದು ಕಳ್ಳತನ ಮಾಡುತ್ತಿರುವುದಾಗಿ ಜನ ಥಳಿಸುವ ವೇಳೆ ಬಾಯಿಬಿಟ್ಟಿದ್ದಾರೆ. ಶನಿವಾರ ರಾತ್ರಿ ಈ ಮೂರು ಮನೆಯಲ್ಲಿ ಯಾರೂ ಇರಲಿಲ್ಲ. ಈ ಮೂರು ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರು. ಶನಿವಾರ ರಾತ್ರಿ ಸುಮಾರು ಏಳು ಗಂಟೆ ಹೊತ್ತಿಗೆ ಜೋರಾಗಿ ಮಳೆ ಸುರಿಯುತ್ತಿದ್ದು ಸಿಡಿಲಿನ ಆರ್ಭಟವೂ ಇತ್ತು. ಈ ಸಂದರ್ಭ ಉಪಯೋಗಿಸಿಕೊಂಡ ಇಬ್ಬರು ಕಳ್ಳರು ಲೈಟ್ ಉರಿಯದ ಎರಡು ಮನೆಗಳಿಗೆ ನುಗ್ಗಿದ್ದಾರೆ. ಅಲ್ಲಿ ಏನೂ ಸಿಗದ ಬಳಿಕ ಕಾಡಂಗಡಿಯ ಹಮೀದ್ ಮನೆಗೆ ನುಗ್ಗಿ ಕಳ್ಳತನ ಮಾಡಿ ಹೋಗುವ ವೇಳೆ ಹಮೀದ್ ಅವರ ಸಂಬಂಧಿಕರೊಬ್ಬರು ನೋಡಿದ್ದರು. ಸಿಡಿಲು ಮಳೆಯ ಹಿನ್ನೆಲೆಯಲ್ಲಿ ಇನ್‌ವರ್ಟರ್ ಅನ್ನು ಆಫ್ ಮಾಡುವಂತೆ ಹಮೀದ್ ಸಂಬಂಧಿಕರೋರ್ವರಲ್ಲಿ ತಿಳಿಸಿದ್ದರು. ಇನ್‌ವರ್ಟರ್ ಬಂದ್ ಮಾಡಲು ಬಂದವರಿಗೆ ಮನೆಯ ಕಡೆಯಿಂದ ಇಬ್ಬರು ಓಡಿಹೋಗುವ ದೃಶ್ಯ ಕಂಡುಬಂದಿದೆ. ಕೂಡಲೇ ಅವರು ಸ್ನೇಹಿತರಿಗೆ ತಿಳಿಸಿ ಹುಡುಕಿದ್ದಾರೆ. ಬೈಕ್‌ನಲ್ಲಿ ಬಂದ ಕಳ್ಳರು ಇವರನ್ನು ನೋಡಿ ಓಡುವ ಭರದಲ್ಲಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರು ಬೇರೆ ಬೇರೆ ದಿಕ್ಕಿನಲ್ಲಿ ಪರಾರಿಯಾಗಲು ಯತ್ನಿಸಿದ್ದು ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಥಳಿಸಿ ಕಳ್ಳತನದ ಬಗ್ಗೆ ಮಾಹಿತಿ ಪಡೆದುಕೊಂಡು ಪೋಲೀಸರಿಗೊಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net