

ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಪುರಸಭೆಗೆ ನೇರ ನೇಮಕಾತಿಯಾಗಿರುವ 34 ಪೌರಕಾರ್ಮಿಕರ ವೇತನದಲ್ಲಿ ಪುರಸಭಾ ನಿಧಿಯಿಂದ ಅರ್ಧಭಾಗವನ್ನು ನೀಡುವುದಕ್ಕೆ ಬಂಟ್ವಾಳ ಪುರಸಭೆ ವಿಶೇಷ ಸಭೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜ್ಯದ ಪೌರಾಡಳಿತ ನಿರ್ದೇಶನಾಲಯ 2024 ಏಪ್ರಿಲ್ 7ರಂದು ಸರ್ಕಾರ ಹೊರಡಿಸಿದ ಸುತ್ತೋಲೆಯಂತೆ ನೇರ ನೇಮಕಾತಿಯಾದ 34 ಪೌರಕಾರ್ಮಿಕರಿಗೆ ಕನಿಷ್ಠ ವೇತನ 18 ಸಾವಿರ ರೂ. ಹಾಗೂ ಸಂಕಷ್ಟ ಭತ್ತೆ 2 ಸಾವಿರ ರೂ. ಬಿಡುಗಡೆ ಮಾಡಿದ್ದು, ಉಳಿಕೆ ಮೊತ್ತವನ್ನು ಪುರಸಭಾ ನಿಧಿಯಿಂದ ಭರ್ತಿಗೊಳಿಸಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಾಧಿಕಾರಿ ನಜೀರ್ ಸಭೆಗೆ ತಿಳಿಸಿದರು. ಇದನ್ನು ಆಕ್ಷೇಪಿಸಿದ ಸದಸ್ಯ ಗೋವಿಂದ ಪ್ರಭು, ಕರ್ನಾಟಕ ರಾಜ್ಯಪತ್ರದಲ್ಲಿ ಉಲ್ಲೇಖವಾದ ಅಂಶ ನಮಗೆ ಮುಖ್ಯ. ಸರ್ಕಾರದ ಸುತ್ತೋಲೆಗಳು ದಿನಕ್ಕೊಂದು ಬರುತ್ತಲೇ ಇರುತ್ತದೆ. ಇದನ್ನು ಕೌನ್ಸಿಲ್ ಸಭೆ ಒಪ್ಪಬೇಕಾಗಿಲ್ಲ ಎಂದು ಸಮರ್ಥಿಸಿಕೊಂಡರು. ಪೌರಕಾರ್ಮಿಕರಿಗೆ ಮೊದಲ ಆದ್ಯತೆಯಲ್ಲಿ ವೇತನ ನೀಡುವಂತೆ ಸದಸ್ಯರ ಆಗ್ರಹ. ತಾನು ಕೂಡ ಈ ಬಗ್ಗೆ ಮುಖ್ಯಾಧಿಕಾರಿಗೆ ಸೂಚಿಸಿದ್ದೇನೆ. ಇನ್ನುಳಿದಂತೆ ಮುಖ್ಯಾಧಿಕಾರಿ ವಿವೇಚನೆಗೆ ಬಿಡಲಾಗುವುದು ಎಂದು ಅಧ್ಯಕ್ಷ ವಾಸು ಪೂಜಾರಿ ರೂಲಿಂಗ್ ನೀಡಿದರು. ಸರ್ಕಾರದ ಆದೇಶ ಉಲ್ಲಂಸಿ ತಾನು ಮುಂದುವರಿಯಲು ಸಾಧ್ಯವಿಲ್ಲ. ಸರ್ಕಾರದ ಸುತ್ತೋಲೆಯಂತೆ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. ಉಪಾಧ್ಯಕ್ಷ ಮೋನೀಶ್ ಆಲಿ ಉಪಸ್ಥಿತರಿದ್ದರು.ಸದಸ್ಯರಾದ ರಾಮಕಷ್ಣ ಆಳ್ವ, ವಿದ್ಯಾವತಿ, ಶಶಿಕಲಾ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಮ್ಯಾನೇಜರ್ ರಜಾಕ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಉಪಸ್ಥಿತರಿದ್ದರು. 40 ವರ್ಷದ ಇತಿಹಾಸದಲ್ಲಿ ಇದೇ ಮೊದಲು! ಇದೀಗ ಪೌರಕಾರ್ಮಿಕರನ್ನು ಎಸ್ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗ ಎಂದು ವಿಂಗಡಿಸಿ ವೇತನ ನೀಡುತ್ತಿರುವ ಕ್ರಮ ತನ್ನ 40 ವರ್ಷದ ಸದಸ್ಯತ್ವದ ಇತಿಹಾಸದಲ್ಲಿ ಇದೇ ಮೊದಲು ಕಂಡಿದ್ದೇನೆ. 34 ಮಂದಿ ನೇರ ನೇಮಕಾತಿಯಾದ ಪೌರಕಾರ್ಮಿಕರಿಗೆ ಕಳೆದ ಆಗಸ್ಟ್‌ನಿಂದ ಇದುವರೆಗೆ ವೇತನ ಪಾವತಿಸಿದ ರೀತಿಯಲ್ಲೇ ಮುಂದುವರಿಸುವಂತೆ ಮತ್ತು ಈ ಹಿಂದೆ ಶ್ರೀಧರ್ ಎಂಬುವರು ಮುಖ್ಯಾಧಿಕಾರಿಯಾಗಿದ್ದಾಗ ಪೌರಕಾರ್ಮಿಕರಿಗೆ ವೇತನ ನೀಡಿರುವುದರ ಪ್ರತಿಯೊಂದನ್ನು ಗೋವಿಂದ ಪ್ರಭು ಸಭೆಯ ಗಮನಕ್ಕೆ ತಂದರು. ನಿರ್ಣಯ ಮಾರ್ಪಾಡು ಮಾಡಿ ಅನುಮೋದನೆ ಪುರಸಭಾ ನಿಧಿಯಿಂದ ಅನುದಾನ ಬಳಕೆ ಮಾಡುವುದಕ್ಕೆ ವಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ಸಲ್ಲಿಸಿದರು. ನಂದಾವರ ಶಾರದಾ ಹೈಸ್ಕೂಲ್ ಬಳಿ ಕಸ ಎಸೆಯುವುದನ್ನು ತಡೆಗಟ್ಟಲು ಈಗಾಗಲೇ ಕೈಗೊಂಡಿರುವ ನಿರ್ಣಯವನ್ನು ಮಾರ್ಪಾಡು ಮಾಡಿ ಕಾಮಗಾರಿ ನಡೆಸಲು ಸಭೆ ಅನುಮೋದನೆ ನೀಡಿತು. ಈ ವಿಚಾರದಲ್ಲಿ ಸದಸ್ಯ ಸಿದ್ದೀಕ್ ಕಾಮಗಾರಿ ಮಾರ್ಪಾಟಿನ ಉದ್ದೇಶವನ್ನು ಸಭೆಗೆ ತಿಳಿಸಿದರು. ಪಾವತಿಗೆ ಬೇಕಿದೆ 5ರಿಂದ 6 ಲಕ್ಷ ರೂ.! ಪುರಸಭಾ ನಿಧಿಗೆ ತೆರಿಗೆಯಿಂದ ಎಷ್ಟು ಹಣ ಸಂಗ್ರಹವಾಗುತ್ತದೆ. ಪೌರಕಾರ್ಮಿಕರಿಗೆ ಎಷ್ಟು ಭಾಗ ಹಣ ಕೊಡಬೇಕಾಗುತ್ತದೆ ಎಂದು ಸದಸ್ಯರಾದ ಮಹಮ್ಮದ್ ಶರೀಫ್, ಹರಿಪ್ರಸಾದ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಜೀರ್, 11 .50 ಲಕ್ಷ ರೂ. ಸರ್ಕಾರ ಪಾವತಿಸಿದರೆ ಉಳಿಕೆ 5ರಿಂದ 6 ಲಕ್ಷ ರೂ.ಪುರಸಭಾ ನಿಧಿಯಿಂದ ಪಾವತಿಸಬೇಕಾಗುತ್ತದೆ ಎಂದರು. ಮುಂದಿನ ತಿಂಗಳು ಜೆಸಿಬಿ, ಸಕ್ಕಿಂಗ್ ವಾಹನದ ಚಾಲಕ ನಿಯುಕ್ತಿಗೊಂಡರೆ ಅವರ ವೇತನವು ಸೇರಲಿದೆ ಎಂದು ಹರಿಪ್ರಸಾದ್ ಗಮನಸೆಳೆದರು.
ಎಸ್‌ಎಫ್‌ಸಿ ಅನುದಾನವನ್ನು ಪೌರಕಾರ್ಮಿಕರ ವೇತನಕ್ಕೆ ಬಳಸಿದರೆ ಸದಸ್ಯರು ತಮ್ಮ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡುವುದಾದರೂ ಹೇಗೆ ? ಕನಿಷ್ಠ ಚರಂಡಿಯ ಹೂಳೆತ್ತಲು ಸದಸ್ಯರಿಗೆ ಅನುದಾನಕ್ಕೆ ಬರ ಬಂದಿದೆ. ಜನರ ತೆರಿಗೆಯಿಂದ ಪುರಸಭಾ ನಿಧಿಗೆ ಬರುವ ಅನುದಾನವನ್ನು ಪೌರಕಾರ್ಮಿಕರ ವೇತನಕ್ಕೆ ಬಳಸಿದರೆ ನಾವೇನು ಮಾಡಬೇಕು. ಸರ್ಕಾರವೇ ಪೂರ್ಣ ವೇತನ ಪಾವತಿಸಿ ಕ್ರಮಕೈಗೊಳ್ಳಲಿ. ಗೋವಿಂದ ಪ್ರಭು ಪುರಸಭೆ ಸದಸ್ಯ https://www.vijayavani.net/demand-for-sand-and-red-stone-mining-opportunities https://www.vijayavani.net/kempegowda-jayanti-7