

ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆ ಚತುಷ್ಪಥವಾಗಿ ಅಭಿವೃದ್ಧಿಗೊಂಡ ಬಳಿಕ ರಸ್ತೆ ಸಾಕಷ್ಟು ವಿಸ್ತರಣೆಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ರಸ್ತೆ ಅಭಿವೃದ್ಧಿಗೊಂಡ ಬಳಿಕವಂತೂ ನುಣುಪಾದ ರಸ್ತೆಯಲ್ಲಿ ವಾಹನ ಸವಾರರ ನಾಗಲೋಟದಿಂದಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ನಾಲ್ಕು ಮಾರ್ಗಗಳು ಕೂಡುವ ಬೈಪಾಸ್ ಜಂಕ್ಷನ್‌ನಲ್ಲಿ ಪ್ರತಿ ದಿನ ಒಂದಲ್ಲ ಒಂದು ಅಪಘಾತ ನಡೆಯುತ್ತಿದ್ದು, ಆಕ್ಸಿಡೆಂಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದೆ.
ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆಯವರಗೆ ಚತುಷ್ಪಥವಾದ ಬಳಿಕ ಬೈಪಾಸ್, ಜಕ್ರಿಬೆಟ್ಟು ಬಳಿ ಪದೇ ಪದೆ ಅಪಘಾತಗಳು ನಡೆಯುತ್ತಿದೆ. ನಾಲ್ಕು ಮಾರ್ಗ ಕೂಡುವ ಬಂಟ್ವಾಳ ಜಂಕ್ಷನ್‌ನಲ್ಲಿ ವಾಹನಗಳು ಡಿಕ್ಕಿಯಾಗಿ ಸವಾರರು ಆಸ್ಪತ್ರೆ ಸೇರುವ ಜತೆಗೆ ವಾಹನಗಳು ಜಖಂ ಆಗುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇದರಿಂದಾಗಿ ಕೆಲಹೊತ್ತು ಹೆದ್ದಾರಿಯಲ್ಲಿ ಇತರ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿರುತ್ತದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ರಸ್ತೆಯಲ್ಲಿ ಶಿಕ್ಷೆ ಅನುಭವಿಸುತ್ತಿರುತ್ತಾರೆ.
ಬಂಟ್ವಾಳ ಜಂಕ್ಷನ್ ನಾಲ್ಕು ರಸ್ತೆಗಳು ಕೂಡುವ ಸ್ಥಳವಾಗಿದೆ. ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ, ಪುಂಜಾಲಕಟ್ಟೆಯಿಂದ ಬಿ.ಸಿ.ರೋಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಯಾದರೆ, ಮೂಡುಬಿದಿರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾಗೂ ಬಂಟ್ವಾಳ ಪೇಟೆಗೆ ಸಂರ್ಕಿಸುವ ರಸ್ತೆಯೂ ಇಲ್ಲೆ ಸಂಧಿಸುತ್ತದೆ. ಮೂಡುಬಿದಿರೆ ರಸ್ತೆಯಿಂದ ಬರುವ ವಾಹನಗಳು ಬಿ.ಸಿ.ರೋಡು ಕಡೆಗೆ ಅಥವಾ ಬಂಟ್ವಾಳ ಪೇಟೆಗೆ ಬರಬೇಕಾದರೆ, ಬಿ.ಸಿ.ರೋಡು ಕಡೆಯಿಂದ ಬರುವ ವಾಹನಗಳು ಬಂಟ್ವಾಳ ಪೇಟೆಗೆ ಹೋಗಬೇಕಾದರೆ ರಾ.ಹೆದ್ದಾರಿ ಮಧ್ಯ ಇರುವ ಮುಖ್ಯ ವೃತ್ತದಲ್ಲಿ ತಿರುವು ಪಡೆದುಕೊಳ್ಳಬೇಕು. ಬಂಟ್ವಾಳ ಪೇಟೆಯಿಂದ ಮೂಡುಬಿದಿರೆ ರಸ್ತೆಗೆ ಬರುವ ವಾಹನಗಳು ಚತುಷ್ಪಥ ಹೆದ್ದಾರಿಯನ್ನು ದಾಟಿ ಮುಂದುವರಿಯಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ನಿಯಂತ್ರಣವಿಲ್ಲದೆ ಶರವೇಗದಲ್ಲಿ ಸಂಚರಿಸುವುದರಿಂದ ಇಲ್ಲಿ ಆಗಾಗ ಅಪಘಾತಗಳು ನಡೆಯುತ್ತಿರುತ್ತವೆ. ಹೆಚ್ಚಾಗಿ ದ್ವಿಚಕ್ರ ವಾಹನಗಳೇ ಅಪಘಾತಕ್ಕೀಡಾಗುತ್ತಿರುತ್ತವೆ. ರಿಫ್ಲೆಕ್ಟರ್, ಹಂಪ್ ಅಳವಡಿಸಿದರೂ ಅಪಘಾತಗಳಿಗೆ ಕಡಿವಾಣ ಬಿದ್ದಿಲ್ಲ. ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ ಈ ಸ್ಥಳಕ್ಕೆ ಬರುವಾಗ ಪ್ರತಿಯೊಬ್ಬ ವಾಹನ ಚಾಲಕರಲ್ಲಿ ಹೆಚ್ಚಿನ ತಾಳ್ಮೆ ಅತ್ಯಗತ್ಯ. ಸ್ವಲ್ಪ ತಾಳ್ಮೆ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ.
ಗುರುವಾರ ಕೆಎಸ್ಸಾರ್ಟಿಸಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆ ನಡೆದಿದೆ. ಫ್ರಾನ್ಸಿಲ್ ಪೌಲ್ ಲೋಬೋ ಗಾಯಾಳುವಾಗಿದ್ದು, ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಅಪಘಾತಗಳು ಇಲ್ಲಿ ನಿತ್ಯ ನಡೆಯುತ್ತಿರುತ್ತವೆ. ಅಪಘಾತಗಳು ನಡೆಯದಂತೆ ಬೈಪಾಸ್ ಜಂಕ್ಷನ್‌ನಲ್ಲಿ ಶಾಶತ್ವ ಪರಿಹಾರ ಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಂಟ್ವಾಳ ಬೈಪಾಸ್ ಕೂಡು ರಸ್ತೆಯಲ್ಲಿ ಪದೇ ಪದೆ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಯಾರದೋ ನಿರ್ಲಕ್ಷೃಕ್ಕೆ ಇನ್ಯಾರೋ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಬಂಟ್ವಾಳ ಬೈಪಾಸ್‌ನಲ್ಲಿ ಅಪಘಾತ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಯೋಜನೆ ರೂಪಿಸಬೇಕಾಗಿದೆ.-ತೀರ್ಥೇಶ್, ಬೈಪಾಸ್