ಮೇ೧೦, ೧೧ ರಂದು ಬಂಟೆರೆನ ವಾರ್ಷಿಕ ಸಮ್ಮಿಲನ

bantara sanga
Published on

ಮಡಿಕೇರಿ: ಕೊಡಗು ಜಿಲ್ಲಾ ಬಂಟರ ಸಂಘ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಮೇ೧೦ ಮತ್ತು ೧೧ ರಂದು ಮಡಿಕೇರಿಯಲ್ಲಿ ಬಂಟೆರೆನ ವಾರ್ಷಿಕ ಸಮ್ಮಿಲನ-೨೦೨೫ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಯುವ ಬಂಟ್ಸ್ ಅಸೋಸಿಯೇಷನ್ ನಿರ್ದೇಶಕ ಕೆ.ಶರತ್ ಕುಮಾರ್ ಶೆಟ್ಟಿ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಮ್ಯಾನ್ಸ್ ಕಾಂಪೌಂಡ್‌ನಲ್ಲಿ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಸದಾನಂದ ರೈ ಅವರ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಸಮಾಜ ಬಾಂಧವರಿಗಾಗಿ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ೧೦ ರಂದು ಬೆಳಿಗ್ಗೆ ೭.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಬಂಟರ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗಿರೀಶ್ ರೈ, ಗಾಳಿಬೀಡು ನಿವೃತ್ತ ಯೋಧ ಬಾಬು ಪ್ರಸಾದ್ ರೈ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ, ವಿಷ್ಮ ರೆಸಾರ್ಟ್ ಮಾಲೀಕ ನಿತಿನ್ ಶೆಟ್ಟಿ, ಉದ್ಯಮಿ ಕೆ.ಡಿ.ಸತೀಶ್ ರೈ, ಮಡಿಕೇರಿ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಶಶಿಕಲಾ ಲೋಕೇಶ್ ರೈ, ನಗರ ಕಾರ್ಯದರ್ಶಿ ಸುಜಾತ ಗಣೇಶ್ ರೈ, ನಿಕಟಪೂರ್ವ ಅಧ್ಯಕ್ಷೆ ಸೌಮ್ಯ ಸದಾಶಿವ ರೈ, ಖಜಾಂಚಿ ಮಾಲತಿ ರೈ ಹಾಗೂ ಕೊಡಗು ಬಂಟರ ಭವನ ಟ್ರಸ್ಟ್ ಖಜಾಂಚಿ ಬಾಲಕೃಷ್ಣ ರೈ ಪಾಲ್ಗೊಳ್ಳಲಿದ್ದಾರೆ. ಯುವ ಬಂಟ್ಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ನಿತಿನ್ ರೈ, ಉಪಾಧ್ಯಕ್ಷರಾದ ಮಿಥುನ್ ರೈ, ಸುಜಿತ್ ಶೆಟ್ಟಿ, ಖಜಾಂಚಿ ಶಿವಪ್ರಸಾದ್ ರೈ, ಸದಸ್ಯರಾದ ಕಿಶೋರ್ ರೈ ಹಾಗೂ ಚರಣ್ ರೈ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೇ ೧೧ ರಂದು ಸಂಜೆ ೫.೩೦ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ, ಗೌರವ ಅಧ್ಯಕ್ಷ ಬಿ.ಬಿ.ಐತಪ್ಪ ರೈ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಬಂಟರ ಸಂಘದ ಕಾರ್ಯದರ್ಶಿ ವಿ.ರವೀಂದ್ರ ರೈ, ಉಪಾಧ್ಯಕ್ಷ ಬಿ.ಕೆ.ರವೀಂದ್ರ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ಸದಾಶಿವ ರೈ, ವಿರಾಜಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಜನಾರ್ಧನ ಶೆಟ್ಟಿ, ವಿರಾಜಪೇಟೆ ತಾಲೂಕು ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನೀತು ರೈ, ಮಡಿಕೇರಿ ನಗರಾಧ್ಯಕ್ಷ ಪ್ರಭು ರೈ, ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಜಯರಾಮ್ ರೈ, ಉದ್ಯಮಿಗಳಾದ ಅಶ್ವಿನಿ ಪುರುಷೋತ್ತಮ್ ರೈ, ಜಯಪ್ರಕಾಶ್ ರೈ, ಶರತ್ ಕುಮಾರ್ ಶೆಟ್ಟಿ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ವಸಂತ್ ರೈ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ವಿವಿಧ ಕ್ರೀಡೆ: ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ ನಡೆಯಲಿದ್ದು, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ನಿಂಬೆ ಚಮಚ ಮತ್ತಿತರ ವೈವಿಧ್ಯಮಯ ಆಟೋಟ ಸ್ಪರ್ಧೆಗಳು ನಡೆಯಲಿವೆ. ಮಕ್ಕಳಿಗೆ ೧೦೦ ಮೀ ಓಟ ಹಾಗೂ ಮನೋರಂಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದೇ ಸಂದರ್ಭ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವ ನೋಂದಾಣಿ ನಡೆಯಲಿದೆ. ಯುವ ಬಂಟ್ಸ್ ಅಸೋಸಿಯೇಷನ್ ಗೆ ಸದಸ್ಯರಾಗುವವರು ೪೫ ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

ಯೋಧರಿಗೆ ಬೆಂಬಲ: ಮತ್ತೋರ್ವ ನಿರ್ದೇಶಕರಾದ ಎನ್.ರವಿಕಿರಣ್ ಶೆಟ್ಟಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದೆ. ದೇಶದ ವೀರಯೋಧರು ನಡೆಸಿದ ಯಶಸ್ವೀ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಯುವ ಬಂಟ್ಸ್ ಅಸೋಸಿಯೇಷನ್ ಸ್ವಾಗತಿಸುತ್ತದೆ ಮತ್ತು ಸೈನಿಕರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಕೆ.ಸದಾನಂದ ರೈ, ಪ್ರಧಾನ ಕಾರ್ಯದರ್ಶಿ ನಿತಿನ್ ರೈ ಹಾಗೂ ನಿರ್ದೇಶಕ ಸುನಿಲ್ ಬಿ.ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net