ಬಂಟ ಸಮಾಜದ ನಾಯಕತ್ವ ಗುಣ ಶ್ಲಾಘನೀಯ: ಶೋಭಾ

DSC00191
Published on


 ಉಡುಪಿ : ಬಂಟ ಸಮಾಜ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿ ಅದನ್ನು ಯಶಸ್ವಿಗೊಳಿಸಿದ ಉದಾಹರಣೆಗಳಿವೆ. ದೇಶ-ವಿದೇಶಗಳಲ್ಲಿದ್ದರೂ ತುಳುನಾಡಿನ ಸಂಸತಿ, ಅಚಾರ-ವಿಚಾರಗಳನ್ನು ಮರೆತಿಲ್ಲ. ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಸಮುದಾಯದ ಕೊಡುಗೆ ಅಪಾರ ಎಂದು ಕೇಂದ್ರ ಕೃಷಿ ಮತ್ತು ರೈತರ ಅಭಿವೃದ್ಧಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

 ಭಾನುವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ವಿಶ್ವ ಬಂಟರ ಸಮ್ಮೇಳನ ಪ್ರಯುಕ್ತ  ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ತೆರೆದ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಂಟರ ಸಾಂಸ್ಕತಿಕ ವೈಭವ ಸಮಾರಂಭದಲ್ಲಿ ಅವರು ಮಾತನಾಡಿದರು.

ಭೂತಸ್ಥಾನ, ನಾಗ, ದೇವಸ್ಥಾನ, ಗರಡಿಯಲ್ಲಿ ನಡೆಯುವ ಯಾವುದೇ ಕಾರ್ಯಗಳ ನೇತೃತ್ವವನ್ನು ಬಂಟ ಸಮುದಾಯ ವಹಿಸಿದರೆ ಅದು ಅಚ್ಚುಕಟ್ಟಾಗಿ ನೆರವೇರುತ್ತದೆ. ಶಿಕ್ಷಿತ ಹಾಗೂ ಸುಸಂಸ್ಕೃತ ಸಮುದಾಯವಾಗಿರುವ ಬಂಟರು, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ಹೊಂದಿದೆ ಎಂದು ಅವರು ಹೇಳಿದರು.

 ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಶಾಸಕರಾದ ಗುರುರಾಜ್ ಗಂಟಿಹೊಳೆ, ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ,  ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ವೀಣಾ ಶೆಟ್ಟಿ, ಉದ್ಯಮಿಗಳಾದ ಬೆಲ್ಲಾಡಿ ಅಶೋಕ್ ಶೆಟ್ಟಿ, ರಾಜೇಂದ್ರ ವಿ.ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಸಾಂಸ್ಕತಿಕ ವೈಭವದ ಸಹ ಸಂಚಾಲಕ ಕರ್ನೂರು ಮೋಹನ್ ರೈ ಮೊದಲಾದವರು ಉಪಸ್ಥಿತರಿದ್ದರು.

ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ವಂದಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಯಂಕಾಲದವರೆಗೆ ನಡೆದ ಸಾಂಸ್ಕೃತಿಕ ವೈಭವದಲ್ಲಿ 30ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಚಿತ್ರನಟಿ ಮಾನಸಿ ಸುಧೀರ್, ನಟಿ ಪ್ರಥಮಾ ವಿನಯಪ್ರಸಾದ್, ನಟ ದೀಪಕ್ ಶೆಟ್ಟಿ ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net