

ಉಡುಪಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ.28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ-, ಕ್ರೀಡಾ ಸಂಗಮ ಮತ್ತು ಸಾಂಸ್ಕತಿಕ ಸಂಭ್ರಮ ನಡೆಯಲಿದೆ. ಅಜ್ಜರಕಾಡು ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಿ, ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.28ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ನಲ್ಲಿ ಬೃಹತ್ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೆರವಣಿಗೆಯು ನಗರಸಭೆ, ಹಳೆ ಡಯನ ಬಿಗ್ ಬಜಾರ್ ಮೂಲಕ ಅಜ್ಜರಕಾಡು ಭುಜಂಗ ಪಾರ್ಕ್ ಮಾರ್ಗವಾಗಿ ಅಜ್ಜರಕಾಡು ಮೈದಾನವನ್ನು ಪ್ರವೇಶಿಸಲಿದೆ. ಈ ಅದ್ದೂರಿ ಮೆರವಣಿಗೆಯಲ್ಲಿ ವಿವಿಧ ಭಾಗಗಳ ಸುಮಾರು 62 ಕ್ಕೂ ಅಧಿಕ ಬಂಟರ ಸಂಘಗಳ 6 ರಿಂದ 7 ಸಾವಿರ ಮಂದಿ ಭಾಗವಹಿಸಲಿದ್ದಾರೆ. ವಿವಿಧ ಕಲಾ ತಂಡಗಳು, ಉಡುಪಿ ಕಡೆಗೋಲು ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ಹೀಗೆ ವಿವಿಧ ಸ್ತಬ್ಧ ಚಿತ್ರಗಳು, ಕಂಬಳದ ಕೋಣಗಳು, ಕೇರಳದ ತೈಯ್ಯಂ, ಹುಲಿ ವೇಷ, ಕೀಲುಕುದುರೆ ಗೊಂಬೆಗಳು, ಹೊನ್ನಾವರ ಬ್ಯಾಂಡ್ ಸೆಟ್, ಅಗೋಳಿ ಮಂಜಣ್ಣನ ವೇಷಧಾರಿ, ಚೆಂಡೆ, ವಾದ್ಯ, ಡೋಲು, ನಾಗಸ್ವರ, ಬಣ್ಣದ ಕೊಡೆಗಳು ಹಾಗೂ ವಿವಿಧ ವಿನೋದಾವಳಿಗಳು ಮೆರುಗು ಹೆಚ್ಚಿಸಲಿವೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಶ್ರೀ ಸುಘುಣೇಂದ್ರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾದಿಶ ತೀರ್ಥ ಶ್ರೀಪಾದರು, ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಬಾರ್ಕೂರು ಬಾರ್ಗವ ಮಹಾಸಂಸ್ಥಾನದ ಶ್ರೀ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದರು, ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಿ ನಾರಾಯಣ ಅಸ್ರಣ್ಣರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರವಿಣ್ ಭೋಜ ಶೆಟ್ಟಿ ಮತ್ತು ನೈನಿತಾ ಪ್ರವಿಣ್ ಶೆಟ್ಟಿ, ಹೇರಂಬ ಇಂಡಸ್ಟ್ರೀಸ್ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ, ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಂಬೈ ಸಿಎಂಡಿ ತೋನ್ಸೆ ಆನಂದ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ಬಿ.ರಮಾನಾಥ ರೈ, ಎ.ಜೆ. ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ , ಬಂಟರ ಯಾನೆ ನಾಡವರ ಮಾತೃ ಸಂಘ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಉಪಸ್ಥಿತರಿರುವರು ಎಂದರು.
ಕ್ರೀಡೋತ್ಸವದಲ್ಲಿ ಏಕಕಾಲದಲ್ಲ ಪುರುಷರ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರ ತ್ರೋಬಾಲ್, ಹಗ್ಗಜಗ್ಗಾಟ, ಎಲ್ಲಾ ವಯೋಮಾನದವರಿಗೆ ಅಥ್ಲೆಟಿಕ್ ನಡೆಯಲಿದೆ. ಪ್ರತಿ ವಿಭಾಗದ ವಿಜೇತ ತಂಡಗಳಿಗೆ ನಗದು ಬಹುಮಾನ ಪ್ರಥಮ- 1,00,000, ದ್ವೀತಿಯ- 75,000 ತೃತೀಯ ಹಾಗೂ ಚತುರ್ಥ ತಲಾ 50,000 ನಗದು ಹಾಗೂ ಬಂಟರ ಕಪ್ ನೀಡಿ ಗೌರವಿಸಲಾಗುವುದು. ರಾತ್ರಿ 8 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯ ತನಕ ಪ್ರೋ ಕಬಡ್ಡಿ ಮಾದರಿಯಲ್ಲಿ ಎಂಟು ತಂಡಗಳ ಮಧ್ಯೆ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.
29ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ
ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಅ. 29ರಂದು ಬೆಳಿಗ್ಗೆ 9 ಗಂಟೆಗೆ ಸಾಂಸ್ಕೃತಿಕ ವೈಭವ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ. 11 ಗಂಟೆಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮೋಹನ್ ಆಳ್ವಾ, ಮುಂಬೈ ಉತ್ತರ ಸಂಸದ ಗೋಪಾಲ ಶೆಟ್ಟಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಸಚಿವೆ ಶೋಭಾ ಕರಂದ್ಲಾಜೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಉಪಸ್ಥಿತರಿರುವರು ಎಂದರು.
ಸಾಯಂಕಾಲ ಸಮಾರೋಪ ಸಮಾರಂಭವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಸಾಧಕರಾದ ಬ್ಯಾಡ್ಮಿಂಟನ್ ಏಷ್ಯನ್ ಗೇಮ್ಸ್ ವಿಜೇತ ಚಿರಾಗ್ ಶೆಟ್ಟಿ, ಅಂಡರ್ 19 ವರ್ಲ್ಡ್ ಜೂನಿಯರ್ ಚ್ಯಾಂಪಿಯನ್ ಶಿಪ್ ವಿಜೇತ ಅಯುಷ್ ಶೆಟ್ಟಿ ಕಾರ್ಕಳ, ಡಾ. ಎ. ಸದಾನಂದ ಶೆಟ್ಟಿ ಮಂಗಳೂರು, ಡಾ. ಎಮ್. ಎನ್. ರಾಜೇಂದ್ರ ಕುಮಾರ್, ಕೆ. ಪ್ರಕಾಶ್ ಶೆಟ್ಟಿ, ಚಂದ್ರಹಾಸ ಕೆ.ಶೆಟ್ಟಿ, ಪ್ರವಿಣ್ ಶೆಟ್ಟಿ ವಕ್ವಾಡಿ, ಸತೀಶ್ ಶೆಟ್ಟಿ ಪಟ್ಲ, ಸಂತೋಷ್ ಶೆಟ್ಟಿ ಪುಣೆ, ವಿಶು ಶೆಟ್ಟಿ ಅಂಬಲಪಾಡಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಹಾಗೂ ವಿಶ್ವ ಬಂಟರ ಕ್ರೀಡಾಕೂಟ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರು, ಸಹಸಂಚಾಲಕ ಡಾ. ರೋಶನ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಮೋಹನ್ ದಾಸ್ ಶೆಟ್ಟಿ, ನಾಗೇಶ್ ಹೆಗ್ಡೆ , ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.