

ವಿಜಯವಾಣಿ ಸುದ್ದಿಜಾಲ ಶಿರ್ವ
ಹಲವು ವರ್ಷಗಳಿಂದ ಅಧಿಕೃತ ಶಿಕ್ಷಕರು ಇಲ್ಲದ್ದಿದ್ದರೂ, ಶಾಲಾ ಆಡಳಿತ ಮಂಡಳಿ, ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರದಿಂದ ಗೌರವ ಶಿಕ್ಷಕರನ್ನು ನಿಯೋಜಿಸಿ ನಡೆಯುತ್ತಿರುವ 98 ವರ್ಷಗಳ ಇತಿಹಾಸ ಹೊಂದಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಅನುದಾನಿತ ಶಾಲೆಯ ಆರಂಭೋತ್ಸವ ಶುಕ್ರವಾರ ವರ್ಣರಂಜಿತವಾಗಿ ನಡೆಯಿತು.
ಶಾಲಾ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ ವಿದ್ಯಾರ್ಥಿಗಳಿಗೆ ಬಲೂನು ನೀಡಿ, ಮುಖ್ಯರಸ್ತೆಯಿಂದ ಚೆಂಡೆ, ಮಂಗಲವಾದ್ಯದ ಮೆರವಣಿಗೆ ಮೂಲಕ ಬರ ಮಾಡಿಕೊಂಡರು. ಶಾಲಾ ಮಹಾದ್ವಾರದಲ್ಲಿ ಪುಷ್ಪಾರ್ಚಣೆ, ಹಣೆಗೆ ತಿಲಕ, ಆರತಿ ಬೆಳಗಿ, ಸಿಹಿ ನೀಡಿ ಶಿಕ್ಷಕಿಯರು ಸ್ವಾಗತಿಸಿದರು. ಒಂದನೇ ತರಗತಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗಣ್ಯರು ತಮ್ಮ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಗಂಪದಬೈಲು ಜಯರಾಮ ಪ್ರಭು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ್ ಪ್ರಭು, ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ, ವಾರ್ಡ್ ಸದಸ್ಯ ಕೆ.ಆರ್.ಪಾಟ್ಕರ್, ದೇವಳದ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಪಾಟ್ಕರ್, ರಘುನಾಥ್ ನಾಯಕ್ ಪುನಾರು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಂಗೀತಾ ಆರ್.ಪಾಟ್ಕರ್, ಗೌರವ ಶಿಕ್ಷಕಿಯರಾದ ಶಾಲಿನಿ, ವಿನುತಾ, ರೇಷ್ಮಾ, ಸುಮತಿ, ನಾಗರತ್ನಾ ಉಪಸ್ಥಿತರಿದ್ದರು.