ಬಂಟ ಸಮಾಜದಿಂದ ದ.ಕ. ಜಿಲ್ಲೆಗೆ ಕೀರ್ತಿ : ಗೃಹ ಸಚಿವ ಪರಮೇಶ್ವರ್

IMG-20231029-WA0019
Published on

ಉಡುಪಿ : ಅಡು ಮುಟ್ಟದ ಸೊಪ್ಪಿಲ್ಲ. ಬಂಟರು ಮುಟ್ಟದ ಕ್ಷೇತ್ರವಿಲ್ಲ. ಮುನ್ನುಗ್ಗುವ ಛಾತಿ, ಸಹನಶೀಲತೆ, ಧ್ಯೆರ್ಯದ ಕಾರಣದಿಂದ ವಿಶ್ವದಲ್ಲಿ ಮನ್ನಣೆ ಪಡೆದಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಭಾನುವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದಲ್ಲಿ ನಡೆದ ವಿಶ್ವ ಬಂಟರ ಸಮ್ಮೆಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ 200ಕ್ಕೂ ಹೆಚ್ಚು ಸಂಗಳನ್ನು ಸ್ಥಾಪಿಸಲು ಬೇರೆ ಯಾವುದೇ ಸಮಾಜಕ್ಕೆ ಸಾಧ್ಯವಿಲ್ಲ. ಬಂಟ ಸಮಾಜ ದೇಶದ ಅರ್ಥಿಕ ವ್ಯವಸ್ಥೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಮಂಗಳೂರು ರಾಜ್ಯದ 2ನೇ ನಗರವಾಗಿ ಬೆಳೆಯುತ್ತಿದೆ. ದೇಶದ 5ನೇ ಅತೀ ದೊಡ್ಡ ಬಂದರು ಮಂಗಳೂರಿನಲ್ಲಿದೆ. ಪ್ರಸ್ತುತ ಭಾರತ ವಿಶ್ವದ 2ನೇ ಅರ್ಥಿಕತೆಯಾಗಿ ಬೆಳೆಯುತ್ತಿದ್ದು, ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಚಿನ್ನ ಸಂಸ್ಕರಣೆಗೆ ಅವಕಾಶ
ರಾಜ್ಯವನ್ನು ನಂ. 1 ಅರ್ಥಿಕತೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಚಿನ್ನ ಸಂಸ್ಕರಣೆ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಸರ್ಕಾರದಿಂದ  ಜಾಗ ಸಹಿತ ಎಲ್ಲಾ ನೆರವು ನೀಡಲಾಗುವುದು. ಮಂಗಳೂರು&ಬೆಂಗಳೂರು ಕಾರಿಡಾರ್ ನಿರ್ಮಾಣದ ಬೇಡಿಕೆ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಇದರಿಂದ 3.5 ಗಂಟೆಯಲ್ಲಿ ಬೆಂಗಳೂರು ತಲುಪಲು ಸಾಧ್ಯವಾಗಲಿದೆ ಎಂದರು.
ಜಾಗತಿಕ ಬಂಟರ ಸಂಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ, ಎ.ಸದಾನಂದ ಶೆಟ್ಟಿ, ಮುನಿಯಾಲು ಉದಯ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಆನಂದ ಶೆಟ್ಟಿ ತೋನ್ಸೆ, ವಕ್ವಾಡಿ ಪ್ರವಿಣ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಪ್ರವಿಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸಂತೋಷ್ ಶೆಟ್ಟಿ, ರವಿನಾಥ ಶೆಟ್ಟಿ, ದಿವಾಕರ ಶೆಟ್ಟಿ, ಚಿತ್ರನಟ ರಿಷಬ್ ಶೆಟ್ಟಿ, ಸಂಗೀತ ನಿರ್ದೆಶಕ ಗುರುಕಿರಣ್, ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ, ಮಿಥುನ್ ರೈ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಸ್.ಪಿ. ಅರುಣ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net